ಬೆಂಗಳೂರು : ರಾಜ್ಯ ಕಾಂಗ್ರೆಸ್ ನಾಯಕರು ನಗರದ ವಿವಿಧೆಡೆ ಬಡವರಿಗೆ ಹಾಗೂ ಕಾರ್ಮಿಕರಿಗೆ ಆಹಾರ ವಿತರಣೆ ನಡೆಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ಕೆಲವೆಡೆ ತೆರಳಿ ಪರಿಶೀಲನೆ ನಡೆಸಿದರು.
ನಗರದ ವಿವಿಧ ಭಾಗದಲ್ಲಿ ಕಾಂಗ್ರೆಸ್ ನಾಯಕರು ಸ್ವಯಂ ಪ್ರೇರಣೆಯಿಂದ ತಮ್ಮ ವ್ಯಾಪ್ತಿಯಲ್ಲಿ ಪ್ರತ್ಯೇಕ ಆಹಾರ ಸಿದ್ಧಪಡಿಸುವ ಕೇಂದ್ರ ಸ್ಥಾಪಿಸಿ ಅಲ್ಲಿ ಆಹಾರ ಸಿದ್ಧಪಡಿಸಿ, ಸುತ್ತಲಿನ ನಾಗರಿಕರಿಗೆ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ನಿತ್ಯ ಒಂದೊಂದು ಕಡೆ ಭೇಟಿ ಕೊಟ್ಟು ಡಿಕೆಶಿ ಪರಿಶೀಲಿಸುವ ಕಾರ್ಯ ಮಾಡುತ್ತಿದ್ದಾರೆ.
ಇಂದು ರಾಜಾಜಿನಗರದಲ್ಲಿ ಮಾಜಿ ಮೇಯರ್ ಜಿ.ಪದ್ಮಾವತಿ ಅವರು ಹಸಿದವರಿಗೆ ಹಂಚಲು ಊಟ ತಯಾರಿಸಿ, ಪ್ಯಾಕೇಟ್ ಮಾಡುತ್ತಿರುವ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಲ್ಲಿ ಆಹಾರವನ್ನು ಸ್ವತಃ ತಾವೇ ತುಂಬಿ ಸಿದ್ಧಪಡಿಸುವ ಕಾರ್ಯ ಮಾಡಿದರು. ಅಲ್ಲದೇ ಪದ್ಮಾವತಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದಾದ ಬಳಿಕ ರಾಜಾಜಿನಗರ ವಾರ್ಡ್ ಬಿಬಿಎಂಪಿ ಸದಸ್ಯ ಜಿ.ಕೃಷ್ಣಮೂರ್ತಿ ಅವರು ತಮ್ಮ ವಾರ್ಡ್ನಲ್ಲಿ ಹಸಿದವರಿಗೆ ಹಂಚಲು ಊಟ ತಯಾರಿಸಿ, ಪ್ಯಾಕೇಟ್ ಮಾಡುತ್ತಿರುವ ಕೇಂದ್ರಕ್ಕೆ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾರ್ಯಾಧ್ಯಕ್ಷರ ಓಡಾಟ : ಇನ್ನೊಂದೆಡೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಇಂದು ಬಿಟಿಎಂ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡಿದರು. ನಿರಾಶ್ರಿತರಿಗೆ ಹಾಗೂ ವಲಸೆ ಕಾರ್ಮಿಕರಿಗೆ ಹಾಗೂ ಸ್ಥಳೀಯ ಬಡ ಜನಕ್ಕೆ ದಿನನಿತ್ಯ ನೀಡುತ್ತಿರುವ ಆಹಾರ ಮತ್ತು ಅಗತ್ಯ ಆಹಾರ ವಸ್ತುಗಳ ಬಗ್ಗೆ ವೀಕ್ಷಣೆ ಮಾಡಿದರು. ಬಿಟಿಎಂ ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ರಾಮಲಿಂಗ ರೆಡ್ಡಿ ಅವರನ್ನು ಭೇಟಿ ಮಾಡಿ ಅವರಿಂದ ಮಾಹಿತಿ ಪಡೆದರು.
ನಗರದ ವಿವಿಧೆಡೆ ಪಕ್ಷದ ಮುಖಂಡರು, ನಾಯಕರು ಸ್ವಯಂ ಪ್ರೇರಣೆಯಿಂದ ನಾಗರಿಕರಿಗೆ ಆಹಾರ ಪೂರೈಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದಕ್ಕೆ ಪಕ್ಷದ ಹೈಕಮಾಂಡ್ನಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.