ಬೆಂಗಳೂರು: ಕಾಂಗ್ರೆಸ್ ಪಕ್ಷದ ಇತಿಹಾಸ, ತ್ಯಾಗ, ಬಲಿದಾನದ ಶಕ್ತಿ ಏನು ಅಂತಾ ತಿಳಿದಿದೆಯಲ್ಲವೇ? ಬಿಜೆಪಿಯವರು ತಮ್ಮ ಸಾಧನೆಯನ್ನು ಈ ರೀತಿಯಾಗಿ ಹೇಳುತ್ತಾರಾ? ಅವರು ಗೋಹತ್ಯೆ, ಮತಾಂತರ, ಕೇಸರಿ ಶಾಲು ವಿಚಾರವಾಗಿ ಮಾತ್ರ ಮಾತನಾಡುತ್ತಾರೆಯೇ ಹೊರತು ಅವರ ಪಕ್ಷದ ಸಾಧನೆ ಬಗ್ಗೆ ಮಾತನಾಡುವುದಿಲ್ಲ. ಮಾತನಾಡಲು ಏನೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಸಮಾರಂಭದಲ್ಲಿ ಪಾಲ್ಗೊಂಡ ಸಂದರ್ಭ ಮಾತನಾಡಿ, ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾಜದ ಎಲ್ಲ ವರ್ಗದವರು ಅಧಿಕಾರಕ್ಕೆ ಬಂದಂತೆ. ತಾತ್ಕಾಲಿಕವಾಗಿ ನಾವು ಅಧಿಕಾರದಿಂದ ದೂರ ಇರಬಹುದು.
ಆದರೆ, ಮತ್ತೆ ನಾವು ಶಕ್ತಿಶಾಲಿಯಾಗಿ ಬೆಳೆಯುತ್ತೇವೆ. ರಾಜೀವ್ ಗಾಂಧಿ ಅವರು 18 ವರ್ಷದವರಿಗೆ ಮತದಾನ ಹಕ್ಕು ನೀಡಿದಾಗ ಬಿಜೆಪಿಯವರು ಇದ್ದದ್ದೇ ಇಬ್ಬರು ಸಂಸದರು. ಇಷ್ಟು ದೊಡ್ಡದಾಗಿ ಇರಲಿಲ್ಲ. ನೀವೆಲ್ಲರೂ ನಿಷ್ಠೆಯಿಂದ ಪಕ್ಷಕ್ಕೆ ದುಡಿದರೆ ಮತ್ತೆ ಕಾಂಗ್ರೆಸ್ ಬಲಿಷ್ಠವಾಗಿ ಬೆಳೆಯಲಿದೆ. ಎಲ್ಲರೂ ಪ್ರಾಮಾಣಿಕತೆ, ನಿಷ್ಠೆಯಿಂದ, ವ್ಯಕ್ತಿಪೂಜೆ ಬಿಟ್ಟು ಪಕ್ಷ ಪೂಜೆ ಮಾಡಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದರು.
ಈಗಾಗಲೇ ಎಐಸಿಸಿಸಿ ಅಧ್ಯಕ್ಷ ಸ್ಥಾನದಿಂದ ಹಿಡಿದು, ರಾಜ್ಯ ಕಾಂಗ್ರೆಸ್ ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದೆ. ಈ ಹಿಂದೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ, ರಾಜ್ಯ ಅಧ್ಯಕ್ಷ ಸ್ಥಾನಕ್ಕೆ, ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದ ಇತಿಹಾಸವಿದೆ. ಮುಂದಿನ ದಿನಗಳಲ್ಲಿ ಮತ್ತೆ ಎಲ್ಲ ಹುದ್ದೆಗಳಿಗೂ ಚುನಾವಣೆ ನಡೆಯಲಿದ್ದು, ಈ ಸದಸ್ಯತ್ವ ನೋಂದಣಿ ಅಭಿಯಾನ ಬಹಳ ಮುಖ್ಯವಾಗಿದೆ ಎಂದು ವಿವರಿಸಿದರು.
ಇದನ್ನೂ ಓದಿ: ತಮ್ಮನ್ನ 'ನಿಜವಾದ ಸಮಾಜವಾದಿ' ಎಂದಿದ್ದಕ್ಕೆ ಪ್ರಧಾನಿಗೆ ಧನ್ಯವಾದ ಅರ್ಪಿಸಿದ ನಿತೀಶ್ ಕುಮಾರ್
ಕಾಂಗ್ರೆಸ್ ಅಧ್ಯಕ್ಷನಾಗಿ ನಾನೇ ಸದಸ್ಯತ್ವ ನೋಂದಣಿ ಮಾಡುತ್ತಿದ್ದೇನೆ. ಇಂದು ಬೆಳಗ್ಗೆ ನಾನು ರೈಲಿನಿಂದ ಇಳಿಯುತ್ತಿದ್ದಂತೆ 11 ಜನರ ಸದಸ್ಯತ್ವ ನೋಂದಣಿ ಮಾಡಿದ್ದೇನೆ. ರಾಜ್ಯದಲ್ಲಿ ಶೇ.49 ರಷ್ಟು ಮಹಿಳೆಯರಿದ್ದಾರೆ. ಅವರಿಗೆ ನಾವು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುತ್ತಿದ್ದು, ಅವರಲ್ಲಿ ನಾಯಕತ್ವ ಗುಣ ಬೆಳೆಸಲು ಹಾಗೂ ಮನೆ ಮನೆಗೆ ಹೋದಾಗ ಅಲ್ಲಿ ಮಹಿಳೆಯರ ಮಾಹಿತಿ ಪಡೆಯಲು ನೆರವಾಗಲು ಮಹಿಳೆಯನ್ನೂ ಮುಖ್ಯ ನೋಂದಣಿದಾರರಾಗಿ ನೇಮಕ ಮಾಡಿದ್ದೇವೆ ಎಂದು ತಿಳಿಸಿದರು.
ಕಳೆದ ತಿಂಗಳು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದಾಗ ಅವರು ಸದಸ್ಯತ್ವ ನೋಂದಣಿ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು. ಪರಿಣಾಮವಾಗಿ ನಾನು ರಾಜ್ಯ ಪ್ರವಾಸ ಮಾಡುತ್ತಿದ್ದೇನೆ ಎಂದು ವಿವರಿಸಿದರು.
ರಾಹುಲ್ ಗಾಂಧಿಯವರು ಅತಿ ದೊಡ್ಡ ಆಪ್ ಸಿದ್ಧಪಡಿಸಿದ್ದಾರೆ. ಸದಸ್ಯತ್ವ ಅಭಿಯಾನದಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಕೇವಲ ಕಾಂಗ್ರೆಸ್ನವರನ್ನೇ ಸದಸ್ಯರನ್ನಾಗಿ ಮಾಡಿದರೆ ಸಾಲದು, ತಟಸ್ಥವಾಗಿರುವ ಜನರನ್ನು ನಾವು ಪಕ್ಷದತ್ತ ಸೆಳೆಯಬೇಕು ಎಂದು ಹೇಳಿದರು.
ಈಗಾಗಲೇ 19,287 ಮುಖ್ಯ ನೋಂದಣಿದಾರರ ನೇಮಕವಾಗಿದೆ. ಅದರಲ್ಲಿ 10,139 ಜನ ಕಾರ್ಯಪ್ರವೃತ್ತವಾಗಿಲ್ಲ. ನಾವು ಈ ಪಟ್ಟಿ ತಯಾರಿಸಿಲ್ಲ. ಪಕ್ಷ ಯಾರ ಮನೆಯ ಆಸ್ತಿಯೂ ಅಲ್ಲ. ಎಲ್ಲರ ಆಸ್ತಿ. ಈಗಲೂ ಯಾರಾದರೂ ಕೆಲಸ ಮಾಡುತ್ತೇವೆ ಎಂದು ಮುಂದೆ ಬಂದರೆ ನಾವು ಅವಕಾಶ ನೀಡುತ್ತೇವೆ. ಎಲ್ಲ ವರ್ಗದ ಜನರಿಗೆ ಇಲ್ಲಿ ಅವಕಾಶ ಸಿಗಬೇಕು ಎಂದರು.