ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಉಪಚುನಾವಣೆ ಹಿನ್ನೆಲೆ, ಕಾಂಗ್ರೆಸ್ ಅಭ್ಯರ್ಥಿ ಶಿವರಾಜು ಪರ ಮಾಜಿ ಶಾಸಕ ಡಿ.ಕೆ ಶಿವಕುಮಾರ್ ಪ್ರಚಾರ ನಡೆಸಿದ್ದಾರೆ.
ಪ್ರಚಾರಕ್ಕೂ ಮುನ್ನ ಮಹಾಲಕ್ಷ್ಮೀ ಲೇಔಟ್ನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ-ಪುನಸ್ಕಾರ ಸಲ್ಲಿಸಿದ ಡಿಕೆಶಿ ನಂತರ ಅಬ್ಬರದ ಪ್ರಚಾರ ನಡೆಸಿದರು. ಇದೇ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್, ಮೈತ್ರಿ ಸರ್ಕಾರ ಬಂದ್ಮೇಲೆ ಸತತ ಏಳು ಬಾರಿ ಸರ್ಕಾರ ಕೆಡವಲು ಪ್ರಯತ್ನ ಮಾಡಿದರು. ಕಡೆಗೆ ಲೋಕಸಭೆ ಚುನಾವಣೆ ನಂತರ ಆಪರೇಷನ್ ಕಮಲ ಮಾಡಿದ್ದಾರೆ ಎಂದರು.
ಸರ್ಕಾರ ರಚನೆ ಮಾಡುವಾಗ ನಮಗೂ ಅತೃಪ್ತರಿಗೂ ಸಂಬಂಧವಿಲ್ಲ ಅಂದಿದ್ದ ಯಡಿಯೂರಪ್ಪ ಇದೀಗ ಅವರಿಂದಲೇ ಸರ್ಕಾರ ಬಂದಿದ್ದು, ಅವರನ್ನ ಮಿನಿಸ್ಟರ್ ಮಾಡ್ತೀನಿ ಅಂತಾರೆ ಎಂದರು. ಗೋಪಾಲಯ್ಯ ಹೆತ್ತ ತಾಯಿಗೆ, ಪಕ್ಷಕ್ಕೆ, ಈ ಕ್ಷೇತ್ರದ ಮತದಾರರಿಗೆ ಮೋಸ ಮಾಡಿ ಹೋಗಿದ್ದಾರೆ. ಗೋಪಾಲಯ್ಯ ದೇವೇಗೌಡರ ಬೆನ್ನಿಗೆ ಚೂರಿ ಹಾಕಿದ್ದೀರಾ ಇದು ಧರ್ಮನೇನ್ರಿ ಅಂತ ಜೆಡಿಎಸ್ ಪರ ಡಿಕೆಶಿ ಬ್ಯಾಟಿಂಗ್ ಮಾಡಿದರು.
ಶಿವರಾಜು, ನನ್ನ , ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಅಭ್ಯರ್ಥಿಯಲ್ಲ. ಶಿವರಾಜು ಮಹಾಲಕ್ಷ್ಮಿ ಲೇಔಟ್ನ ನಿಮ್ಮ ಅಭ್ಯರ್ಥಿ ಎಂದರು. ಮಹಾರಾಷ್ಟ್ರ ರಾಜಕಾರಣದ ಬಗ್ಗೆ ವ್ಯಂಗ್ಯ ಮಾಡಿದ ಅವರು, ರಾತ್ರೋರಾತ್ರಿ ರಾಷ್ಟ್ರಪತಿ ಆಳ್ವಿಕೆ ವಾಪಸ್ ಪಡೆದು, ಬೆಳ್ಳಂ ಬೆಳಗ್ಗೆ ಪ್ರಮಾನವಚನ ಸ್ವೀಕಾರ ಮಾಡ್ತಾರೆ. ಈ ದೇಶದಲ್ಲಿ ಪ್ರಜಾಪ್ರಭುತ್ವ ಯಾವ ರೀತಿ ಇದೆ ಅನ್ನೊದು ಯೋಚನೆ ಮಾಡಿ. ಮೋಸ ಮಾಡಿ 50 ಕೋಟಿಗೆ ಮಾರಾಟವಾದೋರಿಗೆ ಪಾಠ ಕಲಿಸಿ. ನಿಮ್ಮ ಸ್ವಾಭಿಮಾನಕ್ಕಾಗಿ ನೀವು ಕಾಂಗ್ರೆಸ್ ಗೆಲ್ಲಿಸಿ ಎಂದು ಡಿಕೆಶಿ ಮತ ಪ್ರಚಾರ ಮಾಡಿದರು.