ಬೆಂಗಳೂರು: ಕೋವಿಡ್ ವಿಚಾರದಲ್ಲಿ ಕೇವಲ ಸರ್ಕಾರದ ಘೋಷಣೆಗಳು ಮಾತ್ರ ಕಾಣುತ್ತಿವೆ. ನಿಜವಾದ ಕಾಳಜಿ ಕಾಣಿಸುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಜೂನ್ 14ರಂದು ನಿಗದಿಯಾಗಿರುವ ತಮ್ಮ ಪದಗ್ರಹಣ ನಿಮಿತ್ತ ಪ್ರತಿಜ್ಞಾ ವಿಧಿ ಕಾರ್ಯಕ್ರಮದ ಪೂರ್ವ ತಯಾರಿ ಅಂಗವಾಗಿ ಭಾನುವಾರ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬ್ಲಾಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಜೊತೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ರೈತರಿಗೆ, ಕಾರ್ಮಿಕರಿಗೆ, ಅಸಂಘಟಿತ ವಲಯ ಕಾರ್ಮಿಕರು, ವೃತ್ತಿಪರ ಕಾರ್ಮಿಕರಿಗೆ ಸೂಕ್ತ ಸೌಕರ್ಯ ಕಲ್ಪಿಸುವ ಕಾರ್ಯ ಸರ್ಕಾರದಿಂದ ಆಗಿಲ್ಲ. ಆದ್ದರಿಂದ ನಮ್ಮ ಪಕ್ಷದ ಕಾರ್ಯಕರ್ತರಿಗೆ ಜನರಿಗೆ ಶಕ್ತ್ಯಾನುಸಾರ ಸಹಾಯ ಮಾಡಲು ಸೂಚಿಸಿದ್ದೇನೆ ಎಂದರು.
150ಕ್ಕೂ ಕಡಿಮೆ ಜನರೊಂದಿಗೆ ಪದಗ್ರಹಣ ಸಮಾರಂಭ ನಡೆಸಲು ಸಾಧ್ಯವಿಲ್ಲ. ಇದರಿಂದ ಪರವಾನಗಿ ಕೇಳಿದ್ದೇವೆ. ಅದಕ್ಕೆ ಪರವಾನಗಿ ಸಿಗುವ ನಿರೀಕ್ಷೆ ಇದೆ. ಇದಲ್ಲದೇ ಪ್ರತಿ ವಾರ್ಡ್ನಲ್ಲಿ ಸಮಾರಂಭ ನಡೆಯಲಿದೆ. 6 ಸಾವಿರ ಗ್ರಾಮ ಪಂಚಾಯಿತಿ, ಎಲ್ಲಾ 198 ಪಾಲಿಕೆ ವಾರ್ಡ್, ನಾಲ್ಕು ಕಡೆ ಮುನ್ಸಿಪಾಲಿಟಿಗಳಲ್ಲಿ, 6 ಕಡೆ ನಗರಸಭೆಯಲ್ಲಿ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಮಾಡಿಕೊಡುತ್ತೇವೆ ಎಂದು ವಿವರಿಸಿದರು.
ಎಲ್ಲರೂ ಸಹಕಾರ ನೀಡಿ:
ನನ್ನ ಪದಗ್ರಹಣ ಸಮಾರಂಭಕ್ಕೆ ಎಲ್ಲರ ಸಹಕಾರ ನೀಡಬೇಕೆಂದು ತಿಳಿಸಿದ್ದೇನೆ. ಇಂದು ವೀಡಿಯೋ ಕಾನ್ಫರೆನ್ಸ್ ನಡೆಸಿದ್ದೇನೆ. ಕೋವಿಡ್ ಸಮಸ್ಯೆ ಹಾಗೂ ನನ್ನ ಪದಗ್ರಹಣದ ಸಿದ್ಧತೆಯ ಮಾಹಿತಿ ಕಲೆ ಹಾಕಿದ್ದೇನೆ. 7-8 ಸಾವಿರ ಸಂಪರ್ಕವಿದೆ. ಎಲ್ಲರಿಗೂ ಸರಣಿ ರೂಪದಲ್ಲಿ ಬರಲು ತಿಳಿಸಿದ್ದೆ. 1 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳೇ ಇದ್ದಾರೆ. ನೀವು ಎಲ್ಲೆಲ್ಲಿ ಇರುತ್ತೀರಿ, ಅಲ್ಲಿಯೇ ಇದ್ದು ನಾನು ಮಾತನಾಡುವುದನ್ನು ವೀಕ್ಷಿಸಬೇಕು. ಬೆಂಗಳೂರಿಗೆ ಬರದಂತೆ ಸೂಚಿಸಿದ್ದೇನೆ. ಜನರ ಸಹಕಾರ ನೀಡುವಂತೆ ಸಂದೇಶ ನೀಡಿದ್ದೇನೆ ಎಂದರು.
ಶಿಕ್ಷಣ ಸಚಿವರಿಗೆ ಮನವಿ:
ಆನ್ಲೈನ್ ಶಿಕ್ಷಣಕ್ಕೆ ಸಂಬಂಧಿಸಿದ ಪ್ರತಿ ವ್ಯವಸ್ಥೆಯಲ್ಲೂ ಜನರ ಬಳಿ ಇರಿ ಎಂದು ಶಿಕ್ಷಣ ಸಚಿವರಿಗೆ ಮನವಿ ಮಾಡುತ್ತಿದ್ದು, ಪ್ರತಿ ಹಳ್ಳಿಗೂ ಸಂಪರ್ಕ ಹಾಗೂ ಕಂಪ್ಯೂಟರ್ ತಲುಪಿಸುವ ವ್ಯವಸ್ಥೆ ಮಾಡಿ. ಆಮೇಲೆ ಆನ್ಲೈನ್ ಶಿಕ್ಷಣ ಆರಂಭಿಸಿ ಎಂದು ಸಲಹೆ ನೀಡುತ್ತೇನೆ ಎಂದರು.
ಭಾವನಾತ್ಮಕ ಸಂಬಂಧ:
ಮಂಡ್ಯದ ಮೈ ಶುಗರ್ ಕಾರ್ಖಾನೆಯನ್ನು ಸರ್ಕಾರ ಮಾರಬೇಕು. ಖಾಸಗಿಯವರಿಗೆ ಮಾರುವ ಅವಕಾಶ ಇಲ್ಲ. ಅದನ್ನು ಸರ್ಕಾರವೇ ಪುನಶ್ಚೇತನಗೊಳಿಸಬೇಕು. ಸರ್ಕಾರದ ನಿರ್ಧಾರ ಪ್ರಶ್ನೆ ಮಾಡಿ ನಾವು ನಮ್ಮ ಹೋರಾಟ ಆರಂಭಿಸುತ್ತೇವೆ. ಏಕೆಂದರೆ ಇದು ಮಂಡ್ಯ ಜನತೆಯ ಭಾವನೆಯ ಪ್ರಶ್ನೆಯಾಗಿದೆ ಎಂದು ಹೇಳಿದರು.
ಸರ್ಕಾರ ಅಕ್ಕಿ ನೀಡಬೇಕು:
ರಾಜ್ಯ ಸರ್ಕಾರ ಪ್ರತಿಯೊಬ್ಬ ನಾಗರಿಕನಿಗೂ ಅಕ್ಕಿ ತಲುಪಿಸುವ ಕಾರ್ಯ ಮಾಡಲೇಬೇಕಾಗುತ್ತದೆ. ನಾವು ಅಗತ್ಯ ಉಳ್ಳ ಪ್ರತಿ ವ್ಯಕ್ತಿಯ ಜತೆಗಿದ್ದು, ಅವರಿಗೆ ಸೌಲಭ್ಯ ತಲುಪುವ ರೀತಿ ನೋಡಿಕೊಳ್ಳುತ್ತೇವೆ. ನಮ್ಮ ರೈತರು ಬಡವರು, ಯಾರಿಂದಲೂ ಪಡಿತರ ಬಿಪಿಎಲ್ ಚೀಟಿ ವಾಪಸ್ ಪಡೆಯುವುದು ಸರಿಯಲ್ಲ. ಆಹಾರ ಭದ್ರತೆ ಕಾಯ್ದೆ ಅಡಿ ಕಾರ್ಡಿರುವ ಎಲ್ಲಾ ರೈತರಿಗೂ ಅಕ್ಕಿ ತಲುಪಿಸುವ ಕಾರ್ಯ ಸರ್ಕಾರ ಮಾಡಬೇಕೆಂದು ಆಗ್ರಹಿಸಿದರು.