ಬೆಂಗಳೂರು : ನಾಯಕತ್ವ ಬದಲಾವಣೆ ವಿಚಾರವಾಗಿ ಬಿಜೆಪಿ ನಾಯಕರು ನಡೆಸುವಷ್ಟು ಗಂಭೀರ ಚಿಂತನೆಯನ್ನು ಕೋವಿಡ್ ನಿಯಂತ್ರಣಕ್ಕೆ ಮಾಡುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
ಟ್ವೀಟ್ ಮಾಡಿ ತಮ್ಮ ಬೇಸರ ವ್ಯಕ್ತಪಡಿಸಿರುವ ಅವರು, ರಾಜ್ಯ ಬಿಜೆಪಿಯಲ್ಲಿ ಈಗ ನಾಯಕತ್ವ ಬದಲಾವಣೆ ವಿಚಾರದ ಮಾತುಗಳು ಕೇಳಿ ಬರುತ್ತಿವೆ. ಸರ್ಕಾರ ಬಂದ ದಿನದಿಂದಲೂ ಅಭಿವೃದ್ಧಿಗಿಂತ ಹೆಚ್ಚಾಗಿ ಸರ್ಕಾರ ಉಳಿಸಿಕೊಳ್ಳಲು ಪ್ರಯತ್ನ ನಡೆಸಿರುವ ಬಿಎಸ್ವೈ ನೇತೃತ್ವದ ಸಂಪುಟ, ರಾಜ್ಯದ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ನಿರಂತರವಾಗಿ ಆರೋಪಿಸುತ್ತಾ ಬಂದಿದ್ದಾರೆ.
ಇದೀಗ ಟ್ವೀಟ್ನಲ್ಲಿ ಅವರು, ಮುಖ್ಯಮಂತ್ರಿ ಸ್ಥಾನವನ್ನು ಯಾರು ಅಲಂಕರಿಸಲಿದ್ದಾರೆ ಎಂದು ನಿರ್ಧರಿಸುವುದು ಬಿಜೆಪಿಗೆ ಬಿಟ್ಟಿದ್ದು. ಕರ್ನಾಟಕದ ನಾಗರಿಕನಾಗಿ, ಬಿಜೆಪಿಯ ಬಣ ರಾಜಕೀಯದಿಂದಾಗಿ ಆಡಳಿತವು ಸೊರಗುವುದನ್ನು ನೋಡಲು ಖೇದವೆನಿಸುತ್ತದೆ. ಕೋವಿಡ್ ನಿರ್ವಹಣೆಯೂ ಸೊರಗುತ್ತಿದ್ದು, ಮುಖ್ಯಮಂತ್ರಿ ಹಾಗೂ ಸಚಿವರು ತಮ್ಮ ಖುರ್ಚಿಯ ಕುರಿತು ಮಾತ್ರ ಚಿಂತಿತರಾಗಿದ್ದಾರೆ ಎಂದು ಹೇಳಿದ್ದಾರೆ.
ನಿರಂತರವಾಗಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿರುವ ಶಿವಕುಮಾರ್, ನಾಯಕತ್ವ ಬದಲಾವಣೆ ವಿಚಾರವಾಗಿ ಬಿಜೆಪಿಯಲ್ಲಿ ಎದ್ದಿರುವ ಗೊಂದಲಕ್ಕೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.