ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಗುಜರಾತ್ನ ಭರೂಚ ಜಿಲ್ಲೆಯ ಪಿರಮಾಣ್ ಗ್ರಾಮದಲ್ಲಿ ಹಿರಿಯ ಕಾಂಗ್ರೆಸ್ ಮಖಂಡ ಅಹ್ಮದ್ ಪಟೇಲ್ ಅವರ ಪಾರ್ಥಿವ ಶರೀರದ ಮೆರವಣಿಗೆ ಹಾಗೂ ಅಂತ್ಯ ಸಂಸ್ಕಾರದಲ್ಲಿ ಗುರುವಾರ ಪಾಲ್ಗೊಂಡರು.
ನಿನ್ನೆ ಸಂಜೆ ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಗುಜರಾತಿಗೆ ತೆರಳಿದ್ದ ಶಿವಕುಮಾರ್, ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಇಂದು ಬೆಳಗ್ಗೆ ಅಹ್ಮದ್ ಪಟೇಲ್ ನಿವಾಸಕ್ಕೆ ತೆರಳಿ ಪಟೇಲ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಇದಾದ ಬಳಿಕ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದರು.
ಸಂಜೆ ವೇಳೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಜರಾತ್ನ ಭರೂಚ ಜಿಲ್ಲೆಯ ಪಿರಮಾಣ್ ಗ್ರಾಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಅವರ ನಿವಾಸಕ್ಕೆ ತೆರಳಿ, ಅಹಮದ್ ಪಟೇಲ್ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಈ ಹಿಂದೆ ರಾಜ್ಯಸಭೆಗೆ ಆಯ್ಕೆ ಸಂದರ್ಭ ಎದುರಾದ ಆತಂಕ ನಿವಾರಣೆಗೆ ಗುಜರಾತ್ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನ ಹೊರವಲಯದ ಖಾಸಗಿ ರೆಸಾರ್ಟ್ನಲ್ಲಿ ಇರಿಸಿ ಅಹಮದ್ ಪಟೇಲ್ ಗೆಲುವಿಗೆ ಡಿಕೆಶಿ ಶ್ರಮಿಸಿದ್ದರು. ಈ ಪ್ರಯತ್ನದಿಂದಾಗಿಯೇ ಅಹ್ಮದ್ ಪಟೇಲ್ ಗೆಲ್ಲಲು ಸಾಧ್ಯವಾಗಿದ್ದು, ಇದೀಗ ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಆಯ್ಕೆಯಾಗುವಲ್ಲಿ ಪಟೇಲ್ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ: ಪ್ರಥಮ ಪಿಯುಸಿ ದಾಖಲಾತಿ ದಿನಾಂಕ ವಿಸ್ತರಣೆ
ರಾಜ್ಯ ಕಾಂಗ್ರೆಸ್ ನಾಯಕರ ಪಾಲಿಗೆ ಅಹ್ಮದ್ ಪಟೇಲ್ ಅತ್ಯಂತ ಪ್ರಮುಖ ನಾಯಕರಾಗಿ ಲಭಿಸಿದ್ದರು. ತಮ್ಮ ಪಾಲಿಗೆ ಆಪದ್ಬಾಂಧವರಾದ ಅಹಮದ್ ಪಟೇಲ್ ಅವರ ಅಂತ್ಯ ಸಂಸ್ಕಾರ ಸಂದರ್ಭ ಉಪಸ್ಥಿತರಿರಲೇಬೇಕೆಂಬ ಕಾರಣಕ್ಕೆ ಡಿಕೆಶಿ ತಮ್ಮ ರಾಜ್ಯ ಪ್ರವಾಸದ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ತೆರಳಿದ್ದಾರೆ.