ಬೆಂಗಳೂರು: ನಾಡಿದ್ದು ಪದಗ್ರಹಣ ಕಾರ್ಯಕ್ರಮವಿದೆ. ಕೆಲವು ಮಂದಿಗೆ ಆಹ್ವಾನ ನೀಡಿದ್ದೇವೆ. ಅವರಿಗೆ ಮಾತ್ರ ಒಳಗೆ ಅವಕಾಶವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆಹ್ವಾನ ಇಲ್ಲದವರಿಗೆ ಒಳ ಬರಲು ಅವಕಾಶ ಇರುವುದಿಲ್ಲ. ಅಲ್ಲದೆ ಯಾವುದೇ ಮುಖಂಡರಿಗೂ ಕೂಡ ಒಳ ಬರುವ ಅವಕಾಶ ಇರುವುದಿಲ್ಲ. ಸರ್ಕಾರ ವಿಧಿಸಿರುವ ನಿಯಮಾವಳಿ ಪಾಲಿಸುವ ಮೂಲಕ ಕಾರ್ಯಕ್ರಮ ನಡೆಸುತ್ತೇವೆ ಎಂದು ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿ ಭಾಷಣ ವಿಚಾರ ಮಾತನಾಡಿ, ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಸೋನಿಯಾ ಗಾಂಧಿಯವರು ಕೆಲ ಬೇಡಿಕೆ ಇಟ್ಟಿದ್ದರು. ಪ್ರಧಾನಿಯವರು ಇಟ್ಟ ಬೇಡಿಕೆಗೆ ಮನ್ನಣೆ ನೀಡಿದ್ದಾರೆ. ಕೆಲವೊಂದು ಬೇಡಿಕೆ ಈಡೇರಿಸಿದ್ದಾರೆ. ಆದರೆ ಹೆಚ್ಚಿನ ಬೇಡಿಕೆಗಳನ್ನ ಈಡೇರಿಸಿಲ್ಲ. ಯಾವುದೇ ಹೊಸ ವಿಚಾರಗಳನ್ನ ಘೋಷಿಸಿಲ್ಲ. ಸೋನಿಯಾ ಗಾಂಧಿ ಮನವಿ ಅಂಗೀಕರಿಸಿದ್ದಕ್ಕೆ ಧನ್ಯವಾದ ಎಂದು ಹೇಳಿದರು.
ನಾಳೆ ವೈದ್ಯರ ದಿನ. ಈ ಸಂದರ್ಭ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇವರಿಗೆ ಸಹನುಭೂತಿ ತೋರಿಸಬೇಕು. ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಸಮಾಜ ಸೇವೆ ಮಾಡುತ್ತಿದ್ದಾರೆ. ಇವರ ಜೊತೆ ಆಶಾ ಕಾರ್ಯಕರ್ತೆಯರು ಹಾಗೂ ಇತರೆ ಆರೋಗ್ಯ ಕಾರ್ಯಕರ್ತರ ಬಗ್ಗೆ ನಾವು ವಿಶೇಷ ಕಾಳಜಿ ತೋರಿಸಬೇಕಿದೆ. ಸರ್ಕಾರ ಇವರಿಗಾಗಿ ವಿಶೇಷ ಕಾರ್ಯಕ್ರಮ ರೂಪಿಸಬೇಕು. ಅದನ್ನು ನಾವು ಬೆಂಬಲಿಸುತ್ತೇವೆ ಎಂದರು.