ಬೆಂಗಳೂರು: ನನ್ನ ಬಳಿ ನಂಬರ್ ಇಲ್ಲ, ಅದಕ್ಕೆ ಐ ಆ್ಯಮ್ ಸಿಂಗಲ್ ಎಂದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ತುಮಕೂರಿನ ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿ ಸದಾಶಿವನಗರ ನಿವಾಸಕ್ಕೆ ವಾಪಸಾದ ಕೆಪಿಸಿಸಿ ಅಧ್ಯಕ್ಷರು ನಿವಾಸದಲ್ಲಿಯೇ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನನ್ನ ಬಂಡೆ ಅಂತಾ ನೀವು ಕರೆದಿದ್ದೀರಿ. ಬಂಡೆ ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ನನ್ನ ನೇಣುಗಂಬ ಆದ್ರೂ ಮಾಡಿಕೊಳ್ಳಿ. ಜಲ್ಲಿಕಲ್ಲು, ಚಪ್ಪಡಿ ಆದ್ರೂ ಮಾಡಿಕೊಳ್ಳಿ ಎಂದು ಹೇಳಿದರು.
ನಾನು ಯಾರನ್ನೂ ದೆಹಲಿಗೆ ಕರೆದುಕೊಂಡು ಹೋಗಲ್ಲ. ನನಗೆ ಹುಷಾರಿಲ್ಲ, ಹೊಟ್ಟೆಯಲ್ಲಿ ನೋಯ್ತಿದೆ. ಡಾಕ್ಟರ್ ಸ್ವಲ್ಪ ರೆಸ್ಟ್ ಮಾಡೋದಕ್ಕೆ ಹೇಳಿದ್ದಾರೆ. ಸ್ಟಮಕ್ ಇನ್ಸ್ಪೆಕ್ಷನ್ ಆಗಿದೆ ಎಂದು ಹೇಳಿದ್ದಾರೆ. ಸಿಎಂ ಸ್ಥಾನ ಕೊಡಿ ಇಲ್ಲದಿದ್ದರೆ ಬೇರೆ ಹುದ್ದೆ ಬೇಡ ಎಂದು ಹೇಳಿದ್ದಾರಾ ಎಂಬ ಪ್ರಶ್ನೆಗೆ, ನಾನು ಯಾವ ಪ್ರಶ್ನೆಗೂ ಉತ್ತರ ಕೊಡಲ್ಲ. ನನಗೆ ತಾಳ್ಮೆ ಸಮಯ ಪ್ರಜ್ಞೆ ಹೋರಾಟ ಮನೋಭಾವವಿದೆ. ಪಾಂಡವರ ಸೂತ್ರ ಅನುಸರಿಸ್ತೇವೆ ಅಂತ ವಿಧಾನ ಸಭೆಯಲ್ಲಿ ಹೇಳಿದ್ದೆ. ನನ್ನಲ್ಲಿರುವ ತಂತ್ರಗಳಿಂದ ಪಕ್ಷ ಅಧಿಕಾರಕ್ಕೆ ತಂದಿದ್ದೇನೆ. ಇಷ್ಟು ಸಾಕು ನನಗೆ ಎಂದರು.
ನನಗೆ ಹೊಟ್ಟೆಯಲ್ಲಿ ಸಮಸ್ಯೆಯಾಗಿ ನೋವು ಪ್ರಾರಂಭವಾಗಿದೆ. ಡಾಕ್ಟರ್ ಬರ್ತಾ ಇದ್ದಾರೆ. ನೀವು ನನ್ನನ್ನ ಬಿಟ್ರೆ ನಾನು ರೆಸ್ಟ್ ಮಾಡುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ವಿಚಾರವಾಗಿ ಮಾತುಕತೆಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಬರುವಂತೆ ತಿಳಿಸಿತ್ತು. ಮಧ್ಯಾಹ್ನ 1 ಗಂಟೆಗೆ ವಿಶೇಷ ವಿಮಾನದಲ್ಲಿ ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಹ ಸಂಜೆ 4ಕ್ಕೆ ದಿಲ್ಲಿಗೆ ತೆರಳುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಸದಾಶಿವನಗರ ನಿವಾಸದಲ್ಲಿ ಮಧ್ಯಾಹ್ನದ ಭೋಜನ ಪೂರೈಸಿದ ಬಳಿಕ ತುಮಕೂರಿನ ನೊಣವಿನಕೆರೆ ಅಜ್ಜಯ್ಯನ ಮಠಕ್ಕೆ ಹೋಗಿ ದರ್ಶನ ಪಡೆದು ವಾಪಸ್ ಆಗಿದ್ದಾರೆ.
ಇದೀಗ ಅನಾರೋಗ್ಯದ ಕಾರಣ ನೀಡಿ ವಿಶ್ರಾಂತಿ ಪಡೆಯುವುದಾಗಿ ಹೇಳಿರುವ ಅವರು ದೆಹಲಿಗೆ ತೆರಳುವ ವಿಚಾರದಲ್ಲಿ ಇದುವರೆಗೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎನ್ನಲಾಗುತ್ತಿದೆ. ತಮ್ಮ ಆಪ್ತರಾದ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಅವರು ಇಂದು ಸಂಜೆ ದಿಲ್ಲಿಗೆ ತೆರಳಿದ್ದು ಅವರ ಮೂಲಕ ಮಾಹಿತಿ ಪಡೆಯುವ ಸಾಧ್ಯತೆ ಇದೆ. ಪಕ್ಷದ ಹೈಕಮಾಂಡ್ ನಿಂದ ಹೆಚ್ಚಿನ ಒತ್ತಡ ಬಂದರೆ ಇಂದು ತಡರಾತ್ರಿ ಇಲ್ಲವೇ ನಾಳೆ ಬೆಳಗ್ಗೆ ಡಿಕೆ ಶಿವಕುಮಾರ್ ದೆಹಲಿಗೆ ತೆರಳುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿದ್ದ ಅವರು ಇದರಿಂದ ಬಹುತೇಕ ಹಿನ್ನಡೆ ಅನುಭವಿಸಿದ್ದಾರೆ ಎನ್ನಲಾಗುತ್ತಿದೆ. ಇದೀಗ ಈ ವಿಚಾರವನ್ನೇ ಮನವರಿಕೆ ಮಾಡಲು ಕರೆಯುತ್ತಿರುವ ಹೈಕಮಾಂಡ್ ನಾಯಕರ ಭೇಟಿಯ ಬಗೆಗೂ ಅವರು ಆಸಕ್ತಿ ಹೊಂದಿಲ್ಲ ಎನ್ನಲಾಗುತ್ತಿದೆ. ಒಟ್ಟಾರೆ ರಾಜ್ಯ ಕಾಂಗ್ರೆಸ್ ಬಹುಮತದಿಂದ ಅಧಿಕಾರಕ್ಕೆ ಬಂದಿದ್ದು ಸಿಎಂ ಆಯ್ಕೆ ವಿಚಾರದಲ್ಲಿ ಬಂಡೆ ಮತ್ತು ಟಗರು ನಡುವಿನ ಪೈಪೋಟಿ ತಾರ್ಕಿಕ ಅಂತ್ಯ ತಲುಪಿದೆ.
ಇದನ್ನೂ ಓದಿ:ಖರ್ಗೆ ಅವರಿಗೆ ಪಕ್ಷ ಅಧಿಕಾರಕ್ಕೆ ತರುತ್ತೇನೆ ಎಂದು ಮಾತುಕೊಟ್ಟಿದ್ದೆ, ಯಾರ ಕ್ಲೇಮ್ ಬಗ್ಗೆಯೂ ಮಾತಾಡಲ್ಲ: ಡಿಕೆಶಿ