ಬೆಂಗಳೂರು : ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಆಯ್ಕೆಯಾಗಿ, ಕೌನ್ಸೆಲಿಂಗ್ ಮುಗಿದಿದ್ದರೂ ನೇಮಕಾತಿ ಪತ್ರವನ್ನು ನೀಡದಿರುವ ರಾಜ್ಯ ಸರ್ಕಾರದ ವಿರುದ್ಧ ಇಂದು ಸಹ ಅಹೋರಾತ್ರಿ ಧರಣಿಯನ್ನ ಉಪನ್ಯಾಸಕರು ಮುಂದುವರೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ರಾತ್ರಿ 10ಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಿಯು ಬೋರ್ಡ್ಗೆ ಭೇಟಿ ನೀಡಿ ಉಪನ್ಯಾಸಕರ ಧರಣಿಯಲ್ಲಿ ಪಾಲ್ಗೊಂಡರು.
ಈ ವೇಳೆ ಮಾತನಾಡಿದ ಶಿವಕುಮಾರ್, 2015ರಿಂದ ಈವರೆಗೆ ಅಂದರೆ ಆರು ವರ್ಷ ಕಳೆದಿವೆ. ಕೌನ್ಸೆಲಿಂಗ್ ಮುಗಿದಿದ್ದರೂ ಯಾವುದೇ ಸರ್ಕಾರವಾಗಲಿ ಅವರಿಗೆ ಈವರೆಗೆ ನೇಮಕಾತಿ ಆದೇಶ ಪತ್ರ ನೀಡಿಲ್ಲ. ಒಂದೇ ಒಂದು ನೇಮಕಾತಿ ಪತ್ರಕ್ಕಾಗಿ ಉಪನ್ಯಾಸಕರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ನೇಮಕಾತಿ ಪತ್ರ ಈಗ ನೀಡಿ, ಬೇಕಾದರೆ ಕೋವಿಡ್ ಸಂಕಷ್ಟದ ಕಾಲ ಮುಗಿದ ಬಳಿಕ ನಮ್ಮ ಹಾಜರಾತಿಯನ್ನು ಆರಂಭಿಸುವಂತೆ ಉಪನ್ಯಾಸಕರು ಹೇಳುತ್ತಿದ್ದಾರೆ. ಅವರು ಕೇಳುವುದರಲ್ಲಿ ನ್ಯಾಯ ಇದೆ. ಹಾಗಾಗಿ ಅವರ ಸಮಸ್ಯೆಗೆ ಕಾಂಗ್ರೆಸ್ ಪಕ್ಷ ಬೆಂಬಲವಾಗಿ ನಿಲ್ಲಲಿದೆ. ನಾಳೆ ಬೆಳಗ್ಗೆ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೊಂದು ಪತ್ರ ಬರೆದು ಕೂಡಲೇ ನೇಮಕಾತಿ ಪತ್ರವನ್ನ ಕೊಡವಂತೆ ಮಾಡುತ್ತೇನೆ ಎಂದು ತಿಳಿಸಿದರು.