ಬೆಂಗಳೂರು : ಮಹಿಳೆಯರಿಗೆ ರಾಜಕೀಯ ಪ್ರಜ್ಞೆ ಬೆಳೆದರೆ ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ. ಆರ್.ಆರ್. ನಗರ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಲು ನಾಗರಬಾವಿಯಲ್ಲಿ ಸೋಮವಾರ ಸಂಜೆ ನಡೆದ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದಲ್ಲಿ ವಾಸವಿರುವ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಮೂಲನಿವಾಸಿಗಳ ಸಭೆಯಲ್ಲಿ ಮಾತನಾಡಿದ ಶಿವಕುಮಾರ್, ನಾವು ಹೆಣ್ಣು ಕುಟುಂಬದ ಕಣ್ಣು ಅಂತಾ ನಂಬುತ್ತೇವೆ.
ನಮ್ಮ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿದೆ. ಬಿಜೆಪಿಯವರು 28 ಕ್ಷೇತ್ರದಲ್ಲಿ ಒಂದೂ ಕೊಟ್ಟಿಲ್ಲ. ಬೆಂಗಳೂರಿನಲ್ಲಿ ಮಹಿಳೆಯರ ಪ್ರಮಾಣ ಶೇ. 52ರಷ್ಟಿದೆ. ಭವಿಷ್ಯದ ರಾಜಕೀಯದಲ್ಲಿ ಪ್ರಜ್ಞಾವಂತ ಹೆಣ್ಣುಮಕ್ಕಳಿರಬೇಕು. ಅವರ ನೋವುಗಳನ್ನು ಹೇಳಿಕೊಳ್ಳಲು ಹೆಣ್ಣುಮಕ್ಕಳು ಇರಬೇಕು. ಹೀಗಾಗಿ ಇಂದು ಬುದ್ಧಿವಂತ, ಪ್ರಜ್ಞಾವಂತ, ಸ್ವಾಭಿಮಾನಿ ಹೆಣ್ಣನ್ನು ಆರ್.ಆರ್. ನಗರದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೇವೆ. ಈ ಕ್ಷೇತ್ರದ ಜನ ಹಾಗೂ ಮಹಿಳೆಯರು ಪಕ್ಷಬೇಧ ಜಾತಿ - ಧರ್ಮ ಬೇಧ ಬಿಟ್ಟು ಒಂದಾಗಿ ಕುಸುಮಾ ಅವರನ್ನು ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ ಎಂದಿದ್ದಾರೆ.
ಇದು ಮನೆಬಾಗಿಲಿಗೆ ಬಂದಿರುವ ಅವಕಾಶ. ಇದನ್ನು ನೀವು ಬಳಸಿಕೊಳ್ಳಬೇಕು. ನಾನು ಬಿಜೆಪಿ, ದಳದ ಬಗ್ಗೆ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಈ ಕ್ಷೇತ್ರದಲ್ಲಿ ನಾವು ಕೆಲವು ತಪ್ಪು ಮಾಡಿದ್ದೇವೆ. ಆ ವ್ಯಕ್ತಿ ವಿರುದ್ಧ ಮಹಿಳಾ ಕಾರ್ಪೊರೇಟರ್ ಯಾವ ರೀತಿ ಹೋರಾಟ ಮಾಡಿದ್ದಾರೆ. ನಾವು ಅದನ್ನೆಲ್ಲ ನೋಡಿ ಸುಮ್ಮನಿದ್ದು ತಪ್ಪು ಮಾಡಿದೆವು. ಕ್ಷೇತ್ರದಲ್ಲಿ ಎಲ್ಲ ಕಾರ್ಯಕರ್ತರೂ ಕುಸುಮಾ ಅವರ ಪರ ಕೆಲಸ ಮಾಡುತ್ತಿದ್ದಾರೆ. ನೀವು ನಿಮ್ಮ ಸ್ನೇಹಿತರು, ಕುಟುಂಬ ಸದಸ್ಯರು ಹಾಗೂ ಅಕ್ಕ ಪಕ್ಕದವರ ಜತೆ ಮಾತಾಡಿ ಕುಸುಮಾ ಅವರ ಗೆಲುವಿಗೆ ಶ್ರಮಿಸಬೇಕು ಎಂದರು.
ಆರ್ಥಿಕ ವ್ಯವಸ್ಥೆ, ಉದ್ಯೋಗ, ಮಹಿಳೆಯರು, ರೈತರ ವಿಚಾರವಾಗಿ ಬಿಜೆಪಿ ಸರ್ಕಾರ ಏನು ಭರವಸೆ ಕೊಟ್ಟಿತ್ತು. ಆದರೆ, ಏನು ಮಾಡಿದೆ ಎಂಬುದರ ಬಗ್ಗೆ ಮಾತನಾಡುವುದು ಸಾಕಷ್ಟಿದೆ. ಇದೆಲ್ಲ ನಿಮಗೆ ಅನುಭವವಾಗಿದೆ. ಈ ಸರ್ಕಾರದಿಂದ ಜನಕ್ಕೆ ಪ್ರಯೋಜನ ಆಗಿಲ್ಲ ಅಂತಾ ಸಂದೇಶ ಕೊಡಬೇಕಿದೆ. ಅದಕ್ಕಾಗಿ ನವೆಂಬರ್ 3 ರಂದು ನಡೆಯುವ ಚುನಾವಣೆಯಲ್ಲಿ ಕುಸುಮಾ ಅವರನ್ನು ಗೆಲ್ಲಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.