ಬೆಂಗಳೂರು: ಕೊರೊನಾ ಹರಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರವೇ ನೇರ ಕಾರಣವಾಗಿದ್ದು, ಮೊದಲು ಲಸಿಕೆಯನ್ನು ತರಲಿ. ಆಮೇಲೆ ಅದನ್ನು ಉಚಿತವಾಗಿ ನೀಡುವ ಬಗ್ಗೆ ಘೋಷಣೆ ಮಾಡಲಿ. ಚುನಾವಣೆಗೋಸ್ಕರ ಸುಖಾಸುಮ್ಮನೆ ಆಶ್ವಾಸನೆ ನೀಡುವುದು ಬೇಡ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟೀಕಿಸಿದ್ದಾರೆ.
ರಾಜರಾಜೇಶ್ವರಿ ನಗರದಲ್ಲಿ ಪಕ್ಷದ ಅಭ್ಯರ್ಥಿ ಕುಸುಮಾ ಅವರ ಪರ ಇಂದು ಪ್ರಚಾರ ಮಾಡಿದ ಸಂದರ್ಭದಲ್ಲಿ ಹಾಗೂ ತಮ್ಮ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್ ಸರ್ಕಾರ ಮೊದಲು ಲಸಿಕೆ ಕಂಡುಹಿಡಿದಿರುವ ಘೋಷಣೆ ಮಾಡಲಿ. ಸುಮ್ಮನೆ ಚುನಾವಣೆಗಾಗಿ ಭರವಸೆ ನೀಡುವುದು ಬೇಡ. ಕೊರೊನಾ ಸೋಂಕಿತರಿಗೆ ಸರಿಯಾಗಿ ರಕ್ಷಣೆ ಮಾಡಿ.
ಸರ್ಕಾರವೇ ಈ ರೋಗ ಹರಡಿ, ಅವರಿಗೆ ಹಾಸಿಗೆ, ಚಿಕಿತ್ಸೆ ಸೌಲಭ್ಯ ನೀಡಲು ಸಾಧ್ಯವಾಗಿಲ್ಲ. ಸರ್ಕಾರ ಎಲ್ಲ ವಿಚಾರದಲ್ಲೂ ವಿಫಲವಾಗಿದ್ದು, ಈಗ ಅವರು ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಆಶ್ವಾಸನೆ ನೀಡುವ ಅಗತ್ಯ ಏನಿದೆ? ಈ ಲಸಿಕೆ ತರುವುದು ಯಾವಾಗ? ಕೊಡುವುದು ಯಾವಾಗ? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಸರ್ಕಾರ ಲಾಕ್ ಡೌನ್ ಮಾಡಿದ್ದಕ್ಕೆ ಚಾಲಕರಿಗೆ, ನೇಕಾರರಿಗೆ, ಸವಿತಾ ಸಮಾಜದವರಿಗೆ 5 ಸಾವಿರ ಕೊಡುತ್ತೇನೆ ಎಂದು ಹೇಳಿದರು. ಆದರೆ, ಈವರೆಗೂ ಕೊಟ್ಟಿಲ್ಲ. ಒಬ್ಬ ಕಾರ್ಮಿಕ, ರೈತನಿಗೆ ಸಹಾಯ ಮಾಡಿಲ್ಲ. ನಗರ ಪ್ರದೇಶಗಳಲ್ಲಿ ಕಟ್ಟಡಗಳು ಖಾಲಿ ಬಿದ್ದಿವೆ. ಪಾಲಿಕೆಗಳಿಗೆ ಸೂಚನೆ ನೀಡಿ ಅವರಿಗೆ ತೆರಿಗೆ ವಿನಾಯಿತಿ ಕೊಡಲು ಇವರಿಂದ ಸಾಧ್ಯವಾಗುವುದಿಲ್ಲವೇ? ಬ್ಯಾಂಕ್ ಸಾಲದ ಬಡ್ಡಿ ಮನ್ನಾ ಮಾಡಿದ್ದಾರಾ? ಇವರೇನು ಲಸಿಕೆ ಕೊಡುತ್ತಾರೆ? ಅಂತಾ ಡಿಕೆಶಿ ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡಿದರು.
ಕೊರೊನಾದಿಂದ ಮೃತಪಟ್ಟವರ ಹೆಣವನ್ನು ಬಿಸಾಡಿದರು. ಕೇಂದ್ರ ಸರ್ಕಾರ ನಮ್ಮ ಕೇಂದ್ರ ಸಚಿವರ ಪಾರ್ಥಿವ ಶರೀರವನ್ನು ಅವರ ಕುಟುಂಬದವರಿಗೆ ತೋರಿಸಲಿಲ್ಲ. ಸೇನಾ ವಿಮಾನ ಸೌಲಭ್ಯ ಕಲ್ಪಿಸಿ ಅವರ ಶವವನ್ನು ಇಲ್ಲಿಗೆ ತಲುಪಿಸಿದ್ದರೆ ಅವರ ಕುಟುಂಬದವರು, ಜನರು ಅವರ ಮುಖ ನೋಡಿಕೊಳ್ಳುತ್ತಿದ್ದರು. ಇಚ್ಛೆ ಇದ್ದರೆ ಅದನ್ನು ಮಾಡುವ ಧೃಢ ನಿರ್ಧಾರ ಇರುತ್ತದೆ. ಇದರಲ್ಲೇ ಸರ್ಕಾರಕ್ಕೆ ಯಾವುದೇ ದೂರದೃಷ್ಟಿ ಇಲ್ಲ ಎಂಬುದು ತಿಳಿಯುತ್ತದೆ.
ಮುನಿರತ್ನ ವಿರುದ್ದ ವಾಗ್ದಾಳಿ: ಬಿಜೆಪಿ ಅಭ್ಯರ್ಥಿ ಹಾಗೂ ಆ ಪಕ್ಷದವರು ಉಪ ಚುನಾವಣೆ ಸಂದರ್ಭದಲ್ಲಿ ಏನು ಮಾಡಬೇಕು ಎಂದುಕೊಂಡಿದ್ದಾರೋ ಅದನ್ನು ಬಾಯಲ್ಲಿ ಹೇಳಿದ್ದಾರೆ. ರಾಜ್ಯ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಆರ್.ಆರ್. ನಗರ ಕ್ಷೇತ್ರದಲ್ಲಿ ವಿರೋಧ ಪಕ್ಷದವರಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂಬುದು ಚುನಾವಣಾ ಆಯೋಗಕ್ಕೆ ಮನದಟ್ಟಾಗಿದೆ.
ಸಮಯ ಬಂದಾಗ ಬಂಡೆ ಕಥೆ ಹೇಳುವೆ: ಕಟೀಲ್ಗೆ, ನಮ್ಮ ಅಶೋಕಣ್ಣಗೆ, ಸಿ.ಟಿ ರವಿ ಅಣ್ಣನಿಗೆ, ಸರ್ವೀಸ್ ಪ್ರೋವೈಡರ್ ಅಶ್ವತ್ಥ್ ನಾರಾಯಣ ಅವರಿಗೆ ಎಲ್ಲರಿಗೂ ಸಮಯ ಬಂದಾಗ ಬಂಡೆ ಕಥೆ ಹೇಳುತ್ತೇನೆ.
ಸುರೇಶ್ ಧಮಕಿ ಹಾಕಿದ್ದರೆ ಬಂಧಿಸಲಿ: ಜನಪ್ರತಿನಿಧಿ ಇರುವುದೇ ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಹೋರಾಟ ನಡೆಸಲು. ಒಂದು ವೇಳೆ ಸುರೇಶ್ ಅವರು ಧಮಕಿ ಹಾಕಿರುವುದಕ್ಕೆ ಸಾಕ್ಷಿ ಇದ್ದರೆ, ಅವರ ಮೇಲೆ ದೂರು ನೀಡಿ ಪ್ರಕರಣ ದಾಖಲಿಸಿ ಬಂಧಿಸಲಿ ಎಂದರು.
ಬೆಲೆ ಏರಿಕೆಯಿಂದ ಜನ ಕಂಗಾಲು: ಕಳೆದ ಕೆಲವು ದಿನಗಳಿಂದ ಈರುಳ್ಳಿ ಬೆಲೆ ಹೆಚ್ಚಾಗಿದೆ. ಬೆಂಗಳೂರಿನಲ್ಲೇ ಪ್ರತಿ ಕೆ.ಜಿ ಈರುಳ್ಳಿ ಬೆಲೆ 100 ರೂ. ದಾಟಿದೆ. ಅತ್ತ ರೈತನಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ಇತ್ತ ಗ್ರಾಹಕರಿಗೆ ದುಬಾರಿ ಬೆಲೆ ಬರೆ ಬಿದ್ದಿದೆ. ಕೇವಲ ಈರುಳ್ಳಿ ವಿಚಾರ ಅಷ್ಟೇ ಅಲ್ಲ, ಕಳೆದ ಸಂಸತ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಪಟ್ಟಿಯಿಂದ ಕೆಲವು ಪದಾರ್ಥಗಳನ್ನು ಕೈಬಿಡುವ ಮೂಲಕ ಸರ್ಕಾರ ಈ ಪದಾರ್ಥಗಳ ಮೇಲಿನ ಬೆಲೆ ನಿಯಂತ್ರಣವನ್ನು ಕಳೆದುಕೊಂಡಿರುವುದು ಸಾಬೀತಾಗಿದೆ. ಇದೊಂದು ಆಘಾತಕಾರಿ ಬೆಳವಣಿಗೆ. ಕೋವಿಡ್ ಪರಿಸ್ಥಿತಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಜನರಿಗೆ ಹೊರೆಯಾಗಿದೆ ಎಂದು ಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಸುರಿಸಿದರು.