ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಶಾಸಕರ ಜತೆ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದರು.
ಆ.24 ರಂದು ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಅಲ್ಲಿಂದಲೇ ಶಾಸಕರ ಜೊತೆ ವಿಡಿಯೋ ಸಂವಾದ ನಡೆಸಿದ್ದಾರೆ. ಎರಡು ದಿನಗಳಲ್ಲಿ ಸಾಕಷ್ಟು ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರುವ ಹಿನ್ನೆಲೆ ಲವಲವಿಕೆಯಿಂದಿರುವ ಡಿಕೆಶಿ ಪಕ್ಷದ ವಿದ್ಯಮಾನಗಳ ಕುರಿತು ಮಾಹಿತಿ ಪಡೆಯಲು ಶಾಸಕರ ಜೊತೆ ಸಮಾಲೋಚಿಸಿದರು.
ಕಳೆದ ಒಂದೆರಡು ದಿನಗಳಲ್ಲಿ ರಾಜ್ಯದಲ್ಲಿ ನಡೆದಿರುವ ಮಹತ್ವದ ಬೆಳವಣಿಗೆಗಳು, ಕಾಂಗ್ರೆಸ್ ಪಕ್ಷ ಸಂಘಟನೆಗೆ ಕಾರ್ಯಕರ್ತರನ್ನು ಒಗ್ಗೂಡಿಸುವ ಕಾರ್ಯ ಯಾವ ಹಂತದಲ್ಲಿದೆ, ಕಾಂಗ್ರೆಸ್ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಆರೋಗ್ಯ ಹಸ್ತದ ಪ್ರಗತಿ ಹೇಗಿದೆ? ತಮ್ಮ ಅನುಪಸ್ಥಿತಿಯಲ್ಲಿ ಪಕ್ಷದ ಕಚೇರಿ ಚಟುವಟಿಕೆಯನ್ನು ಹೇಗೆ ನಡೆಸಿಕೊಂಡು ಹೋಗಲಾಗುತ್ತಿದೆ, ತಾವು ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಹೊರಬರುತ್ತಿದ್ದಂತೆ ಕೈಗೊಳ್ಳಬಹುದಾದ ಕಾರ್ಯಗಳು ಯಾವುದು, ನೆರೆ ಪರಿಶೀಲನೆ ಸಂಬಂಧ ತಾವು ರಚಿಸಿರುವ ವಿವಿಧ ತಂಡಗಳ ಅಂತಿಮ ರೂಪ ಕೊಡುವ ಕುರಿತು ಕೂಡ ಇದೇ ಸಂದರ್ಭ ಚರ್ಚಿಸಿದ್ದಾರೆ.
ತಾವು ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ನೆರೆ ಸಮಸ್ಯೆ ಸದ್ಯ ಹೇಗಿದೆ? ರಾಜ್ಯ ಸರ್ಕಾರ ಈ ಭಾಗದಲ್ಲಿ ಯಾವುದಾದರೂ ಕ್ರಮಕೈಗೊಂಡಿದೆಯೇ? ಪ್ರವಾಸ ಮರು ಹೊಂದಾಣಿಕೆ ಮಾಡುವುದಾದರೆ ಯಾವ ದಿನಾಂಕಕ್ಕೆ ತೆರಳುವುದು ಸೂಕ್ತ. ಪಕ್ಷ ಸಂಘಟನೆ ವಿಚಾರವಾಗಿ ತಾವು ನೀಡಿರುವ ಒಂದಿಷ್ಟು ಅಂಶಗಳ ಪಾಲನೆ ಆಗುತ್ತಿದೆಯೇ ಎಂಬ ವಿಚಾರಗಳ ಕುರಿತು ಸವಿಸ್ತಾರವಾಗಿ ಚರ್ಚಿಸಿ ಮಾಹಿತಿ ಪಡೆದಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆರೋಗ್ಯ, ಸಚಿವ ಶ್ರೀರಾಮುಲು ಮತ್ತಿತರ ನಾಯಕರು ಕೋವಿಡ್ ಪಾಸಿಟಿವ್ ಬಂದ ಸಂದರ್ಭದಲ್ಲಿ ಆಸ್ಪತ್ರೆಯಿಂದ ಆನ್ ಲೈನ್ ಸಂವಾದದ ಮೂಲಕ ಕಾರ್ಯನಿರ್ವಹಿಸಿದ್ದರು.
ಸಚಿವ ಡಾ.ಸುಧಾಕರ್ ತಮ್ಮ ಕುಟುಂಬದವರಿಗೆ ಕೊರೊನಾ ಬಂದ ಸಂದರ್ಭ ಮನೆಯಲ್ಲೇ ಕ್ವಾರಂಟೈನ್ ಆಗಿ ಆನ್ ಲೈನ್ ಮೂಲಕವೇ ಹಲವು ಸಭೆ ನಡೆಸಿ ಕಾರ್ಯನಿರ್ವಹಿಸಿದ್ದರು. ಇದೀಗ ಇಂಥದ್ದೆ ಪ್ರಯತ್ನವನ್ನು ಡಿಕೆ ಶಿವಕುಮಾರ್ ಕೂಡ ಮಾಡಿದ್ದು, ಆಸ್ಪತ್ರೆಯಲ್ಲಿ ಇದ್ದುಕೊಂಡು ಪಕ್ಷದ ಚಟುವಟಿಕೆಯ ಮೇಲೆ ನಿಗಾ ವಹಿಸುತ್ತಿದ್ದಾರೆ.