ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಗಲು ವೇಳೆ ಮಾತ್ರ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಾರೆ. ರಾತ್ರಿಯಾದರೆ ನಮ್ಮ ಮುಖ್ಯಮಂತ್ರಿಗಳ ಬಳಿ ಬಂದು ಕೆಲಸ ಮಾಡಿಸಿಕೊಳ್ಳುತ್ತಾರೆ ಎಂಬ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಡಿಕೆಶಿ ತಿರುಗೇಟು ನೀಡಿದ್ದಾರೆ.
ಸಿ.ಪಿ. ಯೋಗೇಶ್ವರ್ ನನ್ನ ಬಳಿ ಬಂದಿದ್ದ. 15 ದಿನಗಳ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಿ ಎಂದು ನನ್ನನ್ನು ಕೇಳಿಕೊಂಡಿದ್ದ ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ಗೆ ಬರ್ತೀನಿ. ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸ್ತಾರೆ. ಕಾಂಗ್ರೆಸ್ ಪಕ್ಷಕ್ಕೆ ಬರ್ತೀನಿ ಎಂದು ನನ್ನ ಬಳಿ ಯೋಗೇಶ್ವರ್ ಚರ್ಚೆ ಮಾಡಿದ್ದ ಎಂದರು. ನಾನೇ ಬೇಡ, ಅಲ್ಲಿಯೇ ಇರು. ಬಿಜೆಪಿಗೆ ಲಾಯಲ್ ಆಗಿರು ಎಂದು ಕಳುಹಿಸಿಕೊಟ್ಟೆ. ಈಗ ಯಾಕೆ ಹೀಗೆ ಮಾತಾಡಿದ್ದಾರೋ ಗೊತ್ತಿಲ್ಲವೆಂದು ಡಿಕೆಶಿ ಹೇಳಿದ್ರು.
ಇನ್ನು, ಎಂಎಲ್ಸಿ ನಾರಾಯಣಸ್ವಾಮಿ ಮಾತನಾಡಿ, ಡಿಕೆಶಿ ಮತ್ತು ಸಿ.ಪಿ ಯೋಗೇಶ್ವರ್ ನಡುವೆಯಾದ ಮಾತುಕತೆಗೆ ನಾನೇ ಸಾಕ್ಷಿ. ಮಾತುಕತೆ ಕಣ್ಣಾರೆ ಕಂಡಿದ್ದೇನೆ ಎಂದರು. ಯಡಿಯೂರಪ್ಪ ಸಿಎಂ ಆಗಲು ಬಹಳಷ್ಟು ಶ್ರಮಪಟ್ಟೆ. ಆದ್ರೆ ನನ್ನನ್ನ ಅವರು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಹೀಗಾಗಿ ಬಿಜೆಪಿ ಸರ್ಕಾರ ಬಹಳ ದಿನ ಇರಲ್ಲ. ನಾನು ತಪ್ಪು ಮಾಡಿದ್ದೇನೆ. ನನ್ನನ್ನ ಕಾಂಗ್ರೆಸ್ಗೆ ಸೇರಿಸಿಕೊಳ್ಳಿ ಅಂತ ಮನವಿ ಮಾಡಿದ. ಅದ್ರೆ ನಮ್ಮ ಅಧ್ಯಕ್ಷರು ಇದಕ್ಕೆ ಒಪ್ಪಲಿಲ್ಲ. ಬುದ್ಧಿ ಮಾತು ಹೇಳಿ ಕಳುಹಿಸಿಕೊಟ್ರು ಎಂದು ಡಿಕೆಶಿಗೆ ದನಿಗೂಡಿಸಿದರು.
ಸಿ.ಪಿ. ಯೋಗೇಶ್ವರ್ ಎಷ್ಟು ಪಕ್ಷಗಳಿಗೆ ಸೇರಿದ್ರು, ಬಿಟ್ರು ಅನ್ನೋ ಎಲ್ಲಾ ಮಾಹಿತಿ ಇದೆ. ನಮ್ಮ ಪಕ್ಷದ ಅಧ್ಯಕ್ಷರ ಬಗ್ಗೆ ಮಾತನಾಡಿದ್ರೆ ನಾವು ಸುಮ್ಮನಿರಲ್ಲ. 15 ದಿನಗಳ ಹಿಂದೆ ಭೇಟಿ ಮಾಡಿದ್ದು ನಿಜ. ಸಂಜೆ ಭೇಟಿ ಆಗಿದ್ದು ಸ್ಥಳದ ಬಗ್ಗೆ ಹೇಳಲ್ಲ ಅಂತಾ ನಾರಾಯಣಸ್ವಾಮಿ ಹೇಳಿದ್ರು.