ಬೆಂಗಳೂರು: ರಾಜ್ಯದ 25 ಸಂಸದರು ಎಲ್ಲಿ ಹೋಗಿದ್ದಾರೆ? ಪ್ರಧಾನಿಗಳ ಬಳಿ ನಿಯೋಗ ಕರೆದುಕೊಂಡು ಹೋಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜ್ಯ ಸರ್ಕಾರವನ್ನ ಒತ್ತಾಯಿಸಿದ್ದಾರೆ.
ಕೇಂದ್ರದ ವಿರುದ್ಧ ಹರಿಹಾಯ್ದ ಡಿಕೆಶಿ
ಬೆಂಗಳೂರಿನ ರೇಸ್ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಪಕ್ಷದಿಂದ ಹಮ್ಮಿಕೊಂಡಿದ್ದ ಜನಧ್ವನಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಕಳೆದ ವರ್ಷದ ನೆರೆ ಪರಿಹಾರ ಕೇಳಿದಷ್ಟು ಬಂದಿಲ್ಲ. ಈ ಬಾರಿಯಾದರೂ ಬಿಜೆಪಿಯ 25 ಸಂಸದರು ಪ್ರಧಾನಿಗೆ ಕೇಳಲಿ. ಸರ್ಕಾರ ಘೋಷಣೆ ಮಾಡಿದ ಪರಿಹಾರ ಇನ್ನೂ ಸಿಕ್ಕಿಲ್ಲ. ಚಾಲಕರಿಗೆ 5,000 ರೂಪಾಯಿ ಪರಿಹಾರ ಇನ್ನು ಬಂದಿಲ್ಲ. ಪ್ರಧಾನಿ ಘೋಷಣೆ ಮಾಡಿದ 20 ಲಕ್ಷ ಕೋಟಿ ರೂ. ಯಾರಿಗೆ ಕೊಟ್ಟಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡಲಿ. ಯಾರ್ಯಾರಿಗೆ ಹಣ ಕೊಟ್ಟಿದ್ದೀರಾ ಅಂತ ದಾಖಲೆ ಬಿಡುಗಡೆ ಮಾಡಲಿ. ಕೊರೊನಾದಿಂದ ಸಾಕಷ್ಟು ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಜನರ ಶಾಪ ಸರ್ಕಾರಕ್ಕೆ ತಟ್ಟುತ್ತೆ ಎಂದೂ ಹೇಳಿದರು.
ಮಿಸ್ಟರ್ ಕಮಿಷನರ್ ಬಿ ಕೇರ್ ಪುಲ್!
ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಪ್ರಕರಣ ಪ್ರಸ್ತಾಪಿಸಿ, ಇಲ್ಲಿ ಕಾಂಗ್ರೆಸ್ ಪಾರ್ಟಿಯನ್ನ ಫಿಕ್ಸ್ ಮಾಡಬೇಕು ಅಂತ ಪ್ರಯತ್ನ ನಡೆದಿದೆ. ಹಾಗೆ ಮಾಡಿದಲ್ಲಿ ಬಿಜೆಪಿ ವಿರುದ್ಧ ಅಲ್ಲ ಪೊಲೀಸರ ವಿರುದ್ಧ ನಾವು ಹೋರಾಟ ಆರಂಭ ಮಾಡುತ್ತೇವೆ. ಮಿಸ್ಟರ್ ಕಮಿಷನರ್ ಬಿ ಕೇರ್ ಪುಲ್. ಬಿಜೆಪಿ ಏಜೆಂಟ್ ರೀತಿ ನೀವು ಕೆಲಸ ಮಾಡಬಾರದು. ಇದನ್ನ ಮನವಿಯಾದರೂ ಅನ್ಕೊಳ್ಳಿ, ಎಚ್ಚರಿಕೆ ಅಂತ ಆದರೂ ಅಂದುಕೊಳ್ಳಿ. ಗಲಭೆಯನ್ನ ಪೊಲೀಸರು ನಿಯಂತ್ರಣ ಮಾಡುವಲ್ಲಿ ವಿಫಲವಾಗಿದ್ದಾರೆ ಎಂದರು.
ಖಡಕ್ ಎಚ್ಚರಿಕೆ
ಈ ಗಲಭೆ ಕಾಂಗ್ರೆಸ್ ಪಕ್ಷಕ್ಕೆ ಫಿಕ್ಸ್ ಮಾಡಲು ಪ್ರಯತ್ನ ಮಾಡಲಾಗುತ್ತಿದೆ. ಇದನ್ನ ಕಾಂಗ್ರೆಸ್ ಪಕ್ಷ ಹಾಗೂ ಡಿಕೆ ಶಿವಕುಮಾರ್ ಬಿಡಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ಇನ್ನೂ ಸತ್ತಿಲ್ಲ. ನಿಮ್ಮ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ಮಂತ್ರಿಗಳು ಪ್ರಭಾವದಿಂದ ಪೊಲೀಸರು ಕಾಂಗ್ರೆಸ್ ಪಕ್ಷವನ್ನ ಫಿಕ್ಸ್ ಮಾಡಲು ಪ್ರಯತ್ನ ನಡೆಸಿರುವುದು ತಿಳಿದು ಬಂದಿದೆ. ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ. ಆದ್ರೆ ಅಮಾಯಕರನ್ನ ಬಂಧಿಸೋದು ಸರಿ ಇಲ್ಲ ಎಂದು ಸರ್ಕಾರ ಹಾಗೂ ಪೊಲೀಸರಿಗೆ ಖಡಕ್ ಎಚ್ಚರಿಕೆ ನೀಡಿದರು.
ನ್ಯಾಯಾಂಗ ತನಿಖೆಯಾಗಲಿ
ನಿಮ್ಮ ತನಿಖಾ ಸಂಸ್ಥೆ ಮೇಲೆ ನಮಗೆ ನಂಬಿಕೆ ಇಲ್ಲ. ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಆಗಬೇಕು. ನಮ್ಮಗೆ ಮ್ಯಾಜಿಸ್ಟ್ರೇಟ್ ತನಿಖೆ ಬೇಕಿಲ್ಲ. ಈಗಾಗಲೇ ನಮ್ಮ ನಾಯಕರಾದ ಖರ್ಗೆ, ಸಿದ್ದರಾಮಯ್ಯ ಇಬ್ಬರೂ ಸಹ ಹೇಳಿದ್ದಾರೆ. ಹೈಕೋರ್ಟ್ ಸಿಟಿಂಗ್ ಜಡ್ಜ್ ಅವರಿಂದ ನ್ಯಾಯಾಂಗ ತನಿಖೆ ಆಗಬೇಕು. ಈಗ ನಾನೂ ಕೂಡ ಹೈಕೋರ್ಟ್ ಸಿಟಿಂಗ್ ಜಡ್ಜ್ ಅವರಿಂದ ನ್ಯಾಯಾಂಗ ತನಿಖೆ ಆಗಬೇಕೆಂದು ಒತ್ತಾಯ ಮಾಡುತ್ತೇನೆ ಎಂದು ಸರ್ಕಾರವನ್ನ ಒತ್ತಾಯಿಸಿದರು.
ಬಿ ರಿಪೋರ್ಟ್ ಏನಾಯ್ತು?
ಶಿವಮೊಗ್ಗದಲ್ಲಿ ಸೋನಿಯಾ ಗಾಂಧಿ ವಿರುದ್ಧ ಎಫ್ಐಆರ್ ಹಾಕಲಾಗಿತ್ತು. ಪೊಲೀಸರ ಕಣ್ಣು ತಪ್ಪಿನಿಂದ ಆಗಿದೆ, ಬಿ ರಿಪೋರ್ಟ್ ಹಾಕ್ತೀವಿ ಎಂದು ಸಿಎಂ ಹೇಳಿದ್ದರು. ಆದ್ರೆ ಈ ಕ್ಷಣದವರೆಗೂ ಬಿ ರಿಪೋರ್ಟ್ ಹಾಕಿಲ್ಲ. ಕಾಂಗ್ರೆಸ್ ನಿಯೋಗ ಸಿಎಂ ಭೇಟಿಯಾದ ವೇಳೆ ಸಿಎಂ ಮಾತು ಕೊಟ್ಟು ಮರೆತು ಹೋಗಿದ್ದಾರೆ. ಇದನ್ನ ಕಾಂಗ್ರೆಸ್ ಪಕ್ಷ ಸಮರ್ಥವಾಗಿ ಎದುರಿಸುತ್ತೆ ಎಂದರು.
ರಾಜೀವ್, ಅರಸು ಗುಣಗಾನ
ಇಂದು ಬಹಳ ಪವಿತ್ರವಾದ ದಿನ. ಅರಸು ಮುಖ್ಯಮಂತ್ರಿ ಆಗಿದ್ದ ವೇಳೆ ಕಾಲೇಜು ವಿದ್ಯಾರ್ಥಿ ಆಗಿದ್ದೆ. ರಾಜೀವ್ ಗಾಂಧಿ ಮತ್ತು ದೇವರಾಜ ಅರಸು ಇಬ್ಬರೂ ದೊಡ್ಡ ನಾಯಕರು. ದೇಶದಲ್ಲಿ ಭವಿಷ್ಯಕ್ಕಾಗಿ ಹೊಸ ನಾಯಕರನ್ನು ದೇಶದಲ್ಲಿ ತಯಾರು ಮಾಡಬೇಕಿದೆ ಎಂದಿದ್ದರು ರಾಜೀವ್ ಗಾಂಧಿ. ಸಂಸತ್ತು ಮತ್ತು ಪಂಚಾಯತ್ ಗಳಿಂದಲೂ ಕೂಡ ನಾಯಕರು ಇರಬೇಕು. ಹಾಗಾಗಿ ಈ ಇಬ್ಬರು ನಾಯಕರು ಸಾಕಷ್ಟು ನಾಯಕರನ್ನು ತಯಾರು ಮಾಡಿದ್ರು. ಅವರುಗಳಲ್ಲಿ ನಾನೂ ಒಬ್ಬ ಎಂದರು.
ದೇವರಾಜ ಅರಸು ಬಡವರಿಗೆ ಭೂಮಿ ಹಂಚುವ ಕೆಲಸ ಮಾಡಿದ್ರು. ಮನೆ ಇಲ್ಲದೇ ಬಡವರಿಗೆ ಮನೆ ಕೊಟ್ಟ ಕೆಲಸ ಕಾಂಗ್ರೆಸ್ ಮಾಡಿದೆ. ರಾಜೀವ್ ಗಾಂಧಿ ಆಲೋಚನೆ ತುಂಬಾ ದೊಡ್ಡದಾಗಿದ್ವು. ಮಾಹಿತಿ ತಂತ್ರಜ್ಞಾನ ಕೊಡುಗೆ ರಾಜೀವ್ ಗಾಂಧಿ ಅವರದು. ಭಾರತವನ್ನು ಇವತ್ತು ಈಡಿ ವಿಶ್ವ ನೋಡ್ತಾಯಿದೆ ಅಂದ್ರೆ ಅದಕ್ಕೆ ಕಾರಣ ರಾಜೀವ್ ಗಾಂಧಿ ಎಂದರು.