ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಬರೆದ ಪತ್ರಕ್ಕೆ ಉತ್ತರ ಕೊಡ್ತಾರೆ ಅನ್ನೋ ವಿಶ್ವಾಸವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಒಬ್ಬರು ಲಂಚದಿಂದ ಕಿರುಕುಳ ಆಗ್ತಿದೆ ಅಂತ ದಯಾ ಮರಣಕ್ಕೆ ಪತ್ರ ಬರೆದಿದ್ದಾರೆ. ಭ್ರಷ್ಟ ಆಡಳಿತವನ್ನು ಸ್ವಚ್ಛ ಮಾಡಬೇಕು. ಮೋದಿ ತಮ್ಮ ಹಾಗೂ ಪಕ್ಷದ ವೈಭವಕ್ಕೆ ಎಲ್ಲವನ್ನೂ ಮಾಡಿಕೊಳ್ತಿದ್ದಾರೆ. ನಮ್ಮ ಪತ್ರಕ್ಕೆ ಉತ್ತರ ಬಂದಿಲ್ಲ ಅಂದ್ರೆ ಮುಂದೆ ಏನು ಮಾಡಬೇಕೋ ಅದನ್ನು ಮಾಡ್ತೇವೆ. ಗುಂಡಿ ಹೇಗೆ ಮುಚ್ಚುತ್ತಿದ್ದಾರೋ, ಭ್ರಷ್ಟಾಚಾರದ ವಿಚಾರಕ್ಕೆ ಏನು ಸಂದೇಶ ಕೊಟ್ಟು ಹೋಗ್ತಾರೆ ನೋಡ್ತೇವೆ. ಮುಂದಿನ ಹೋರಾಟದ ಬಗ್ಗೆ ಈಗಲೇ ಹೇಳಲ್ಲ. ಐದು ನಿಮಿಷಕ್ಕೆ ಊಟ ರೆಡಿ ಆಗುತ್ತಾ?, ಮೊದಲು ಮಸಾಲೆ ರೆಡಿ ಮಾಡಬೇಕು, ಕಟ್ಟಿಗೆ ಸಿದ್ಧ ಮಾಡಬೇಕು ಎಂದರು.
ಪ್ರಧಾನಿ ಮೋದಿ ಒಂದು ದಿನದ ಕಾರ್ಯಕ್ರಮಕ್ಕೆ 48 ಕೋಟಿ ಖರ್ಚು ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನೋಡ್ರಿ ಇದು ಮೋದಿ ವೈಭವ ಹಾಗೂ ಬಿಜೆಪಿ ಪಾರ್ಟಿ ವೈಭವ. ಹಾಗಾಗಿ, ಎಷ್ಟು ಖರ್ಚಾಗ್ತಿದೆ ಅನ್ನೋದಕ್ಕೆ ನಿಮ್ಮ ಬಳಿಯೇ ಮಾಹಿತಿ ಇದೆ. ಯಾವ ವೈಭವ ಬೇಕ್ರಾದ್ರು ಮಾಡಿಕೊಳ್ಳಲಿ, ಜನರನ್ನು ಕರೆಸಲಿ, ಇವ್ರು ಏನೇ ಮಾಡಿದ್ರು ಜನ ಬಿಜೆಪಿ ಸರ್ಕಾರ ಕಿತ್ತೊಗೆಯಬೇಕು ಅಂತ ಸಂಕಲ್ಪ ಮಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯ ಸರ್ಕಾರದ ಲೋಪಗಳ ಬಗ್ಗೆ ಪ್ರಧಾನಿಗೆ ಪತ್ರ; ಪ್ರಧಾನಿಗಳು ಉತ್ತರ ಕೊಡಬೇಕು ಎಂದ ಡಿಕೆಶಿ
ಮೋದಿ ಹೋಗುವ ರಸ್ತೆ ಮಾತ್ರ ಸರಿಯಾಗಿದೆ ಎಂಬ ವಿಚಾರ ಕುರಿತು ಮಾತನಾಡಿ, ಅವರ ನಾಯಕರ ಸಲುವಾಗಿ ರಸ್ತೆ ಮಾಡಿದ್ದಾರೆಯೇ ಹೊರತು ಜನರ ಸಲುವಾಗಿ ಮಾಡಿಲ್ಲ. ಸದ್ಯದಲ್ಲಿ ಯುವಕರು ರಸ್ತೆ ಗುಂಡಿಗಳಲ್ಲಿ ಹೋಮ ಹವನ ಶುರು ಮಾಡ್ತಾರೆ ಎಂದು ವಿವರಿಸಿದರು.
ಇದನ್ನೂ ಓದಿ: ಪ್ರಧಾನಿ ಮೋದಿ ಬೆಂಗಳೂರಿಗೆ ಗುಂಡಿಗಳ ನಗರ ಎಂದು ಬಿರುದು ನೀಡಲಿ: ಡಿಕೆಶಿ
ಪ್ರತಿಮೆ ನಿರ್ಮಾಣ ಏರ್ಪೋರ್ಟ್ ಅಥಾರಿಟಿಯಿಂದ ಆಗಬೇಕಿತ್ತು ಎಂಬ ಬಗ್ಗೆ ಪ್ರತಿಕ್ರಿಯಿಸಿ, ನಾನು ಮೊದಲೇ ಹೇಳಿದ್ದೆ, ಈಗ ಹೇಳ್ತಿರೋದಲ್ಲ. ಬೇಕಿದ್ರೆ ನನ್ನ ಬೈಟ್ ಪಾಯಿಂಟ್ಸ್ ತೆಗೆದು ನೋಡಲಿ. ಏರ್ಪೋರ್ಟ್ನವರೇ ಮಾಡ್ತಾ ಇದ್ರು. 50-60 ಕೋಟಿ ಹಣ ಖರ್ಚು ಮಾಡುವುದು ಏರ್ಪೋರ್ಟ್ನವರಿಗೆ ದೊಡ್ಡ ವಿಚಾರವಲ್ಲ. ಬಿಜೆಪಿಯವರು ಏನೇನೋ ಲೆಕ್ಕಾಚಾರ ಹಾಕಿಕೊಂಡು ಮಾಡ್ತಿದ್ದಾರೆ. ಏರ್ಪೋರ್ಟ್ ಆನಾವರಣ ಅವರೇ ಮಾಡಬೇಕಿತ್ತು. ಸರ್ಕಾರದ ದುಡ್ಡನ್ನು ಹೇಗೆ ಉಳಿಸಬೇಕು, ಬಳಸಬೇಕು ಅನ್ನೋದು ಬೇಸಿಕ್ ಕಾಮನ್ ಸೆನ್ಸ್. ಇವರು ಏನೋ ದೊಡ್ಡ ಹೆಸರು ಮಾಡಿಕೊಳ್ಳಬೇಕು ಅಂತ ಬಹಳ ಅರ್ಜೆಂಟ್ನಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.