ಬೆಂಗಳೂರು : ಬಿಜೆಪಿ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿವೆ, ಆ ಬಗ್ಗೆ ಎಲ್ಲವೂ ನನಗೆ ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಬಹಳ ಹಿರಿಯರು, ಬುದ್ಧಿವಂತರು ಹಾಗೂ ಸಾಹಿತಿಗಳಿದ್ದಾರೆ. ಅವರಿಗೆ ರಾಜಕಾರಣದಲ್ಲಿ ಬಹಳ ಅನುಭವವಿದೆ. ಹೋರಾಟದ ಕುಟುಂಬದ ಹಿನ್ನೆಲೆಯಿದೆ. ಅವರಿಗೆ ಯಾವ ಸಮಯದಲ್ಲಿ ಏನು ಹೇಳಬೇಕು ಅನ್ನೋದು ಗೊತ್ತಿದೆ ಎಂದರು.
ಕುಮಾರಸ್ವಾಮಿಯವರ ಮಾತಿನಲ್ಲಿ ಸಾಹಿತ್ಯದ ಶಬ್ಧಕೋಶವೇ ಅಡಗಿದೆ. ನಾನು ಅದನ್ನು ಕಲಿತುಕೊಳ್ಳುತ್ತೇನೆ. ರಾಜಕೀಯದಲ್ಲಿ ಗೆಲುವು-ಸೋಲು ಸಹಜ. ಅದರಿಂದ ಅನುಭವ ಬರುತ್ತದೆ.
ಚನ್ನಪಟ್ಟಣದಲ್ಲಿ ಫೈರಿಂಗ್ ಆಯ್ತು ಎಂದು ಎಸ್ ಎಂ ಕೃಷ್ಣ ಸರ್ಕಾರದ ವಿರುದ್ಧ ಮತ್ತು ಗಂಗಾಧರಮೂರ್ತಿ ಕೊಲೆ ಪ್ರಕರಣ ಸಂಬಂಧ ಪಾದಯಾತ್ರೆ ಮಾಡಿದರು.
ತಲೆ ಮೇಲೆ ಸೀಮೆಎಣ್ಣೆ ಡಬ್ಬ ಇಟ್ಟುಕೊಂಡು ಪ್ರತಿಭಟನೆ ಮಾಡಿದ್ದಾರೆ. ಅದೇ ರೀತಿ ಕಾಂಗ್ರೆಸ್ ಪಕ್ಷ ಕೂಡ ಪಾದಯಾತ್ರೆ ಮಾಡುತ್ತಿದೆ. ಬಿಜೆಪಿಯವರು ರಥಯಾತ್ರೆ ಮಾಡಿದ್ದಾರೆ. ನೆರೆ ರಾಜ್ಯದ ಜಗನ್ ಮೋಹನ್ ರೆಡ್ಡಿಯವರು ಪಾದಯಾತ್ರೆ ಮಾಡಿದ್ದಾರೆ.
ದೇಶದ ರೈತರು ಕೂಡ ಹೋರಾಟ ಮಾಡಿದ್ದಾರೆ. ಇವೆಲ್ಲ ಹೋರಾಟಗಳ ಮೈಲಿಗಲ್ಲು. ಕೆಲವಕ್ಕೆ ಫಲ ಸಿಕ್ಕರೆ, ಕೆಲವಕ್ಕೆ ಸಿಕ್ಕಿಲ್ಲ. ಎಲ್ಲರಿಗೂ ಫಲ ಸಿಗಬೇಕು ಎಂಬುದಿಲ್ಲ ಎಂದರು.
ಅಕ್ಕಿ -ಅರಿಶಿನ ಸೇರಿದರೆ ಮಂತ್ರಾಕ್ಷತೆ : ಪಂಚೆ ಕಟ್ಟುವುದಕ್ಕೂ, ಶರ್ಟ್ ಹಾಕುವುದಕ್ಕೂ, ನಮಸ್ಕಾರ ಮಾಡುವುದಕ್ಕೂ ಸಿನಿಮಾ ಸ್ಟೈಲ್, ಡಿಸೈನ್ ಶೂರ ಎಂದು ಬಿರುದು ಕೊಟ್ಟಿದ್ದಾರೆ. ಹಳ್ಳಿಯಿಂದ ಬಂದ ನಮಗೆ ಬೇಸರವಿಲ್ಲ. ಕುಮಾರಸ್ವಾಮಿಯವರು ಏನೇ ಹೇಳಿದರೂ ಇದು ಪಕ್ಷಾತೀತ ಹೋರಾಟ.
ದಳದವರು, ಬಿಜೆಪಿಯವರು, ಸಂಘ-ಸಂಸ್ಥೆಗಳು ಬರಲಿ, ಸಿನಿಮಾ ಕ್ಷೇತ್ರದವರು, ಮಠಾಧೀಶರು, ಕಾಲೇಜು, ಸಂಘಗಳಿಗೂ ಮನವಿ ಮಾಡಿದ್ದೇನೆ. ಯಾರಿಗೆ ಇಚ್ಛೆ ಇದೆಯೋ ಅವರು ಪಾದಯಾತ್ರೆಗೆ ಬರಬಹುದು. ಈ ಯೋಜನೆ ನನಗಾಗಿ ಅಲ್ಲ, ಜನರಿಗಾಗಿ ಮಾಡಲಾಗುತ್ತಿದೆ.
ಹೋರಾಟ, ತ್ಯಾಗ, ಬಲಿದಾನ ನಮ್ಮ ಪಕ್ಷದ ಇತಿಹಾಸ. ಅದು ನಮ್ಮ ರಕ್ತದಲ್ಲಿ ಹರಿದು ಬಂದಿದೆ. ಕುಮಾರಣ್ಣನವರು ಏನೇ ಹೇಳಿದರೂ ಬಹಳ ಸಂತೋಷ. ಅದನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ. ಪಂಚೆ ಧರಿಸಿಯೇ ಅವರ ಜೊತೆ ಕಾವೇರಿ ಪೂಜೆ ಮಾಡಿದ್ದೇನೆ. ಬ್ರದರ್ ಜೊತೆ ಅಕ್ಷತೆಯನ್ನೂ ಹಾಕಿದ್ದೇನೆ. ಅಕ್ಕಿ ಒಂದು ಕಡೆ ಇರುತ್ತದೆ. ಅರಿಶಿನ ಒಂದು ಕಡೆ ಇರುತ್ತದೆ. ಅವೆರಡು ಸೇರಿದರೆ ಮಂತ್ರಾಕ್ಷತೆ ಆಗುತ್ತದೆ ಎಂದರು.
ಯಾವ ಬಿರುದು ನೀಡಿದ್ರೂ ಸ್ವಿಕರಿಸುವೆ : ನನಗೆ 11 ದಿನಗಳ ಸೂತಕ ಇದ್ದ ಕಾರಣ ನಾನು ತಲಕಾವೇರಿಯಲ್ಲಿ ದೇವಾಲಯದ ಒಳಗೆ ಪ್ರವೇಶ ಮಾಡಲಿಲ್ಲ. ಧ್ರುವನಾರಾಯಣ್ ಹಾಗೂ ರೇವಣ್ಣ ಅವರು ಪೂಜೆ ಮಾಡಿಸಿದ್ದರು. ಧರ್ಮ ಪಾಲನೆಯಲ್ಲಿ ನಮ್ಮದೇ ಆದ ಸಂಪ್ರದಾಯವಿದೆ. ಹೀಗಾಗಿ, ನಾನು ದೂರದಿಂದಲೇ ಆ ದೇವಿಗೆ ನಮಸ್ಕರಿಸಿದೆ.
ಅದನ್ನೂ ಟೀಕೆ ಮಾಡಿದರೆ, ನಾನು ನಟನೇ, ನನ್ನದು ನಟನೆಯೋ ಅಥವಾ ನೈಜತೆಯೋ ಎಂಬುದನ್ನು ಜನ ತೀರ್ಮಾನ ಮಾಡಲಿದ್ದಾರೆ. ಕುಮಾರಸ್ವಾಮಿಯವರು ಯಾವ ಬಿರುದು ಬೇಕಾದರೂ ನೀಡಲಿ, ನಾನು ಬಹಳ ಸಂತೋಷದಿಂದ ಸ್ವೀಕಾರ ಮಾಡುತ್ತೇನೆ ಎಂದರು.
ಕುಮಾರಸ್ವಾಮಿ ಜೊತೆ ಸ್ಪರ್ಧಿಸುವ ಶಕ್ತಿ ಇಲ್ಲ : ಹಳೇ ಮೈಸೂರು ಭಾಗದಲ್ಲಿ ಶಿವಕುಮಾರ್ ಬೆಳೆಯುತ್ತಿರುವುದರಿಂದ ಕುಮಾರಸ್ವಾಮಿ ಹಾಗೂ ದೇವೇಗೌಡರ ಕುಟುಂಬ ವಿಚಲಿತವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರ ಜೊತೆ ಸ್ಪರ್ಧಿಸುವಷ್ಟು ಶಕ್ತಿ ನನಗಿಲ್ಲ.
ರಾಜಕಾರಣ, ಪವಿತ್ರ ಕಾವೇರಿ ಯಾರ ಸ್ವತ್ತು ಅಲ್ಲ. ಇಡೀ ರಾಜ್ಯದ ಜನರ ಆಸ್ತಿ. ರಾಜ್ಯ, ದೇಶಕ್ಕೆ ಒಳ್ಳೆಯದಾಗಬೇಕು. ಬಡವರು, ರೈತರಿಗೆ ಅನುಕೂಲವಾಗಬೇಕು. ಈ ವಿಚಾರದಲ್ಲಿ ಕುಮಾರಸ್ವಾಮಿಯವರು ಏನೇ ಹೇಳಿದರೂ ಅದು ನನ್ನ ಹಿತಕ್ಕಾಗಿ, ನಾನು ತಿದ್ದುಕೊಳ್ಳುತ್ತೇನೆ ಎಂದರು.
ವಯಸಾಯ್ತು, ಕೂದಲು ಬಿಳಿಯಾಗಿವೆ : ಯಾವ ವಯಸ್ಸಿನಲ್ಲಿ ಎಲ್ಲೆಲ್ಲಿ ಕುಸ್ತಿ, ಜಗಳ ಮಾಡಬೇಕೋ ಮಾಡಿದ್ದೇನೆ. ಕೂದಲು ಬೆಳ್ಳಗಾಗಿವೆ. ಅವರಿಗೆ ಶಕ್ತಿ ಇರಬಹುದು, ನನಗಿಲ್ಲ. ಅವರ ಮಾತಿಗೆ ಜನ ಉತ್ತರ ನೀಡುತ್ತಾರೆ. ನನ್ನ ಮೇಲೆ ಏನೆಲ್ಲಾ ಪ್ರಯೋಗ ಆಗಬೇಕೋ ಅವೆಲ್ಲ ಆಗಿವೆ. ನಾನು ಕಲ್ಲು, ಬಂಡೆ ಎಲ್ಲವನ್ನು ಹೊತ್ತಿದ್ದೇನೆ. ಎರಡೂ ಪಕ್ಷದಿಂದ ನನ್ನ ವಿರುದ್ಧ ದೊಡ್ಡ ಮಟ್ಟದಲ್ಲಿ ಷಡ್ಯಂತ್ರ ನಡೆಯುತ್ತಿದ್ದು, ನನಗೆ ಎಲ್ಲವೂ ಗೊತ್ತಿದೆ ಎಂದರು.
ಪಾದಯಾತ್ರಗೆ ಅನುಮತಿ ಕೇಳಲ್ಲ : ಪಾದಯಾಯತ್ರೆಗೆ ನಾನು ಯಾರ ಅನುಮತಿ ಕೇಳುವುದಿಲ್ಲ. ನಮ್ಮ ಕಾಲು, ನಮ್ಮ ನಡಿಗೆ. ನೀರಿಗಾಗಿ ನಮ್ಮ ಹಕ್ಕು, ನಮ್ಮ ನಡಿಗೆ. ಇದು ನಮ್ಮ ಹೋರಾಟ. ನಮ್ಮ ಪಾದಯಾತ್ರೆ 7 ಗಂಟೆಗೆ ಮುಗಿಯುತ್ತದೆ. ನಮ್ಮ ರಸ್ತೆಯಲ್ಲಿ ನಾವು ನಡೆಯಲು ಯಾರ ಅಪ್ಪಣೆ ಬೇಕು.
ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಬಹುದು ಎಂದು ನಾವು ಡಬಲ್ ರಸ್ತೆಗಳನ್ನೇ ಪಾದಯಾತ್ರೆಗೆ ಆಯ್ಕೆ ಮಾಡಿದ್ದೇವೆ. ನಾವು ಬೇರೆ ವಿಚಾರವಾಗಿ ಹೋರಾಟ ಮಾಡಿದಾಗ ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಅವರು ಕೋವಿಡ್ ನಿಯಮ ಉಲ್ಲಂಘಿಸಿ ಮದುವೆ, ಸಭೆ, ಸಮಾರಂಭ ಮಾಡಿದ್ದರೂ ಪ್ರಕರಣ ದಾಖಲಿಸಿಲ್ಲ. ಆ ವಿಚಾರವಾಗಿ ಬೇರೆ ಸಮಯದಲ್ಲಿ ಮಾತನಾಡುತ್ತೇವೆ ಎಂದರು.
ಮೇಕೆದಾಟು ಹೋರಾಟದಿಂದ ನಮ್ಮ ಪ್ರಾಣ ಹೋದರೂ ಸರಿ, ನಾವು ಹಿಂದೆ ಸರಿಯುವುದಿಲ್ಲ. ಪಾದಯಾತ್ರೆ ಮಾಡಿಯೇ ಮಾಡುತ್ತೇವೆ. ಇದು ಕಾಂಗ್ರೆಸ್ ಇತಿಹಾಸ, ಬದ್ಧತೆ. ನಾನು, ಶಾಸಕಾಂಗ ಪಕ್ಷದ ನಾಯಕರು, ಶಾಸಕರು, ಮುಖಂಡರು ಸೇರಿ ಈ ಬಗ್ಗೆ ತೀರ್ಮಾನಿಸಿದ್ದೇವೆ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿಂದು ಕೊರೊನಾ ಸ್ಫೋಟ : ಒಂದೇ ದಿನ 566 ಮಂದಿಗೆ ಸೋಂಕು ದೃಢ