ಬೆಂಗಳೂರು: ಗಣೇಶನಿಗೂ ಸಾವರ್ಕರ್ಗೂ ಏನು ಸಂಬಂಧ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದರು. ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ತಿಲಕರ ಫೋಟೋ ಹಾಕಿದರೆ ಅದಕ್ಕೊಂದು ನ್ಯಾಯವಿದೆ. ಸಾವರ್ಕರ್ ಫೋಟೋದಿಂದ ಏನು ಮೆಸೇಜ್ ಹೋಗುತ್ತದೆ ಎಂದು ಪ್ರಶ್ನಿಸಿದರು. ಅವರ ಪಕ್ಷವನ್ನ ಅವರೇ ಡಿಗ್ರೇಡ್ ಮಾಡಿಕೊಳ್ತಾರೆ. ಅವರ ತತ್ವ, ಸಿದ್ಧಾಂತವನ್ನು ಅವರೇ ಕೆಡಿಸಿಕೊಳ್ತಾರೆ. ಅವರಿಗೆ ಅಭಿವೃದ್ಧಿ ಬೇಕಿಲ್ಲ. ಗಲಾಟೆ, ಗದ್ದಲ ಮಾಡಿಸುವುದೇ ಅವರ ಗುರಿ ಎಂದು ಕಿಡಿ ಕಾರಿದರು.
ಬಿಡಿಎಗೆ ಸುಪ್ರೀಂ ಛೀಮಾರಿ ಹಾಕಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಧಿಕಾರಿಗಳು ರಾಜಕೀಯ ಒತ್ತಡ ಇಲ್ಲದೇ ಏನು ಮಾಡಲಾಗಲ್ಲ. ಅದರ ಫಲಾನುಭವಿ ಯಾರು?, ಮೊದಲು ಫಲಾನುಭವಿ ನೈತಿಕ ಹೊಣೆ ಹೊರಬೇಕು. ಯಾರು ಸರ್ಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಅವರು ಕೂಡಲೇ ರಾಜೀನಾಮೆ ಕೊಟ್ಟರೆ ಸೂಕ್ತ. ಬೊಮ್ಮಾಯಿ ಇದನ್ನ ದೊಡ್ಡದು ಮಾಡಿಕೊಳ್ಳುವುದು ಬೇಡ. ಯಾರಿದ್ದಾರೆ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಡಿಕೆಶಿ ಒತ್ತಾಯಿಸಿದರು.
ಆ.28ರಂದು ಕಾಂಗ್ರೆಸ್ ಶಾಸಕಾಂಗ ಸಭೆ: ಸುರ್ಜೇವಾಲ ಬೆಂಗಳೂರಿಗೆ ಬರುತ್ತಿದ್ದಾರೆ. ಆ. 28, 29 ರಂದು ಎರಡು ದಿನ ಇಲ್ಲೇ ಇರುತ್ತಾರೆ. ಸೆ.1 ರಂದು ದೆಹಲಿಯಿಂದ ಒಂದು ಟೀಂ ಬರುತ್ತದೆ. 28 ರಂದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇವೆ. 29 ರಂದು ಪದಾಧಿಕಾರಿಗಳ ಸಭೆ ನಡೆಯಲಿದೆ. ಭಾರತ್ ಜೋಡೋ ಯಾತ್ರೆ ಕುರಿತು ಚರ್ಚೆ ನಡೆಸುತ್ತೇವೆ. ಯಾರಿಗೆ ಯಾವ ಜವಾಬ್ದಾರಿ ನೀಡಬೇಕೆಂದು ಚರ್ಚಿಸಿ, ಎಲ್ಲರಿಗೂ ಜವಾಬ್ದಾರಿ ಹಂಚಿಕೆ ಮಾಡುತ್ತೇವೆ ಎಂದು ಡಿಕೆಶಿ ವಿವರಿಸಿದರು.
ಇದನ್ನೂ ಓದಿ: ಜನರ ಬದುಕಿಗೆ ಕಲ್ಲು ಹಾಕುವ ಕೆಲಸ ಮಾಡಬೇಡಿ: ಬಿಜೆಪಿ ಸರ್ಕಾರಕ್ಕೆ ಡಿಕೆಶಿ ಮನವಿ