ಬೆಂಗಳೂರು : ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದಿಂದ ಕಣಕ್ಕಿಳಿಸುವ ಅಚ್ಚರಿ ಅಭ್ಯರ್ಥಿ ಯಾರು ಎಂಬುದನ್ನು ನಾಳೆಯವರೆಗೆ ಕಾದು ನೋಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಜೆಡಿಎಸ್ ಮುಖಂಡ ಹನುಮಂತರಾಯಪ್ಪ ಅವರ ರಾಜರಾಜೇಶ್ವರಿ ವಿಧಾನಕ್ಷೇತ್ರದ ವ್ಯಾಪ್ತಿಗೆ ಬರುವ ಮಲ್ಲತ್ತಹಳ್ಳಿ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಶನಿವಾರ ರಾತ್ರಿ ಭೇಟಿ ನೀಡಿ ಅವರ ಜತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಹನುಮಂತರಾಯಪ್ಪ ಅವರ ಪುತ್ರಿ ಕುಸುಮಾ ರವಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂಬ ಒತ್ತಾಯ ಬಂದಿದೆ. ಅದಕ್ಕೆ ಪಕ್ಷದ ಕಚೇರಿಗೆ ಬಂದು ಸದಸ್ಯತ್ವ ಪಡೆಯಬೇಕು ಎಂದು ಹೇಳಿದೆವು. ಹೀಗಾಗಿ ಕುಸುಮಾ ಅವರು ನಾಳೆ ಬೆಳಗ್ಗೆ 11 ಗಂಟೆಗೆ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ ಎಂದರು.
ಅಭ್ಯರ್ಥಿ ಆಯ್ಕೆ ಸಮಿತಿ ತೀರ್ಮಾನ:
ಪಕ್ಷದ ಅಭ್ಯರ್ಥಿ ಯಾರಾಗಬೇಕು ಎಂಬುದರ ಬಗ್ಗೆ ತೀರ್ಮಾನಿಸಲು ಪಕ್ಷದ ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಅವರ ನೇತೃತ್ವದ ಸಮಿತಿ ಇದೆ. ಆ ಸಮಿತಿ ತೀರ್ಮಾನ ಮಾಡಲಿದೆ. ಇನ್ನು ಪಕ್ಷದಿಂದ ಕಣಕ್ಕಿಳಿಯುವ ಅಚ್ಚರಿ ಅಭ್ಯರ್ಥಿ ಯಾರು ಎಂಬುದನ್ನು ನಾಳೆ ಕಾದು ನೋಡಿ ಎಂದು ವಿವರಿಸಿದರು.
ನಶೆ ಬಗ್ಗೆ ಗೊತ್ತಿಲ್ಲ:
ಡ್ರಗ್ಸ್ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿಗಳ ಹಸ್ತಕ್ಷೇಪ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ ಶಿವಕುಮಾರ್, 'ನನಗೆ ನಶೆಯ ಬಗ್ಗೆ ಯಾವುದೇ ಅನುಭವ ಇಲ್ಲ. ವಿಸ್ಕಿ ಬಗ್ಗೆ ಮಾತ್ರ ಗೊತ್ತಿದೆ.' ಮುಖ್ಯವಾದ ವ್ಯಕ್ತಿ ಯಾರು ಅಂತಾ ಹೇಳುವುದಿಲ್ಲ. ವಿದೇಶದಿಂದ ಬಂದು ಮಾರಾಟ ಮಾಡ್ತಾ ಇರೋರೆ ಆ ಮುಖ್ಯ ವ್ಯಕ್ತಿಗಳು. ಸರ್ಕಾರಕ್ಕೆ ಇದೆಲ್ಲಾ ಗೊತ್ತಿರುವುದಿಲ್ಲವೇ? ಗೊತ್ತಿದ್ದರೂ ನಾಟಕ ಮಾಡಿ, ದಾರಿ ತಪ್ಪಿಸುತ್ತಿದೆ. ಮುಂದೆ ನಿಮಗೆ ಎಲ್ಲಾ ಗೊತ್ತಾಗಲಿದೆ.' ಎಂದರು.