ಬೆಂಗಳೂರು : ಮಧ್ಯರಾತ್ರಿಯಲ್ಲಿ ನಾನು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಪುಟ ಸಹೋದ್ಯೋಗಿಗಳನ್ನ ಭೇಟಿ ಮಾಡಿಲ್ಲ. ಒಂದು ವೇಳೆ ಭೇಟಿ ಮಾಡಿದ್ದು ಸಾಬೀತುಪಡಿಸಿದಲ್ಲಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸವಾಲೆಸೆದಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಿನ್ನೆ ಬಂದ್ ವೇಳೆ ಹಸಿರು ಶಾಲು ಧರಿಸಿ ರೈತರ ಪರ ಫ್ರೀಡಂ ಪಾರ್ಕ್ವರೆಗೆ ಮೆರವಣಿಗೆಯಲ್ಲಿ ಭಾಗವಹಿಸಿ ರೈತರಿಗೆ ಬೆಂಬಲ ನೀಡಿದ್ದೆವು. ನಮ್ಮ ಇಡೀ ಪಕ್ಷ ರೈತರಿಗೆ ಬೆಂಬಲ ನೀಡಿತ್ತು. ಆದರೆ, ಅದನ್ನು ಕುಮಾರಸ್ವಾಮಿ ಟೀಕಿಸಿದ್ದಾರೆ. ಕಾಂಗ್ರೆಸ್ ಶಾಲಿಗೆ ಶಕ್ತಿ ಹೋಗಿದೆ. ಬೆಲೆ ಇಲ್ಲ, ಅದಕ್ಕೆ ಹಸಿರು ಶಾಲು ಧರಿಸಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ನಾನು ರಾಜ್ಯ ಕಾಂಗ್ರೆಸ್ ಅಧ್ಯಕ್ಷನಾಗಿ, ಕಾರ್ಯಕರ್ತನಾಗಿ ಈ ಶಾಲು ಮತ್ತು ಪಕ್ಷದ ಧ್ವಜವನ್ನು ಹೀನಾಯವಾಗಿ ಬೈಸಿಕೊಂಡು ಗೌರವ ಹಾಳು ಮಾಡಲು ಸಿದ್ಧನಿಲ್ಲ. ಇದೇ ಶಾಲು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದೆ. ಇಂದು ಪ್ರಧಾನಮಂತ್ರಿ,ಮುಖ್ಯಮಂತ್ರಿಗಳನ್ನು ಸೃಷ್ಟಿಸಿದೆ ಎಂದು ತಿರುಗೇಟು ನೀಡಿದರು.
ಓದಿ: ಐದೇ ನಿಮಿಷದಲ್ಲಿ ಮುಗಿದು ಹೋದ ಕೃಷ್ಣಾ-ಕಾವೇರಿ ಜಲ ನಿಗಮ ಸಭೆ
ಮಧ್ಯರಾತ್ರಿ ಹೋಗಿ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದ್ದಾರೆ ಎಂದು ಹೆಚ್ಡಿಕೆ ಆರೋಪ ಮಾಡಿದ್ದಾರೆ. ಕುಮಾರಸ್ವಾಮಿ ಕೂಡ ಈ ಹಿಂದೆ ಮುಖ್ಯಮಂತ್ರಿ ಆದವರು. ಈ ರೀತಿ ಆರೋಪ ಮಾಡುವುದು ಸರಿಯಲ್ಲ. ಯಡಿಯೂರಪ್ಪ ಅಥವಾ ಯಾವುದೇ ಸಚಿವರನ್ನು ಮಧ್ಯರಾತ್ರಿ ಭೇಟಿ ಮಾಡಿ ಕೆಲಸ ಮಾಡಿಸಿಕೊಂಡಿದ್ದನ್ನು ಸಾಬೀತುಪಡಿಸಿದ್ರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸವಾಲೆಸೆದರು.
ಹಿಂದೆ ಸಿಎಂ ಯಡಿಯೂರಪ್ಪ ಸಿಎಂ ಆಗಿದ್ದ ವೇಳೆ ಇಬ್ಬರೂ ಒಂದೇ ವಿಮಾನದಲ್ಲಿ ಪ್ರಯಾಣ ಮಾಡಿದ್ದೆವು. ಇಂದು ವಿಮಾನದಲ್ಲಿ ಪ್ರಯಾಣಿಸಿದಾಗ ಕುಶಲೋಪರಿ ಸಹಜ. ಆದರೆ ಇಲ್ಲಿ ಅದಕ್ಕೆ ಬೇರೆ ಬಣ್ಣ ಕಟ್ಟಲಾಗಿತ್ತು. ಕದ್ದುಮುಚ್ಚಿ ರಾಜಕೀಯ ಮಾಡುವ ನೀಚ ರಾಜಕಾರಣ ನನ್ನ ರಕ್ತದಲ್ಲಿ ಇಲ್ಲ.
ಕುಮಾರಸ್ವಾಮಿ ಅವರಿಗೆ ಪೊಲಿಟಿಕಲ್ ಪ್ರಾಬ್ಲಂ ಇರಬಹುದು. ನನಗೇನೂ ಪೊಲಿಟಿಕಲ್ ಪ್ರಾಬ್ಲಂ ಇಲ್ಲ. ನಿಮ್ಮ ಬಗ್ಗೆ ಗೌರವ ಇದೆ. ಕೈಕೆಳಗೆ ಕೆಲಸ ಮಾಡಿದ್ದೇನೆ, ನಿಮಗೆ ಗೌರವ ಕೊಡಲಿದ್ದೇವೆ. ಆದರೆ, ನಮ್ಮ ಪಕ್ಷದ ಹಾಗೂ ನನ್ನ ವೈಯಕ್ತಿಕ ಸ್ವಾಭಿಮಾನ ಮಾರಿಕೊಳ್ಳಲು ಸಿದ್ಧನಿಲ್ಲ ಎಂದು ಹೆಚ್‌ಡಿಕೆಗೆ ಡಿ ಕೆ ಶಿವಕುಮಾರ್ ಟಾಂಗ್ ನೀಡಿದರು.