ಬೆಂಗಳೂರು: ನನ್ನ ನಾಮಪತ್ರ ತಿರಸ್ಕಾರ ಆಗಬೇಕೆಂಬ ಕಾರಣಕ್ಕೆ ಬಿಜೆಪಿ, ಸಿಎಂ ಕಚೇರಿ ಹಾಗೂ ಕಾನೂನು ಘಟಕ ಷಡ್ಯಂತ್ರ ರೂಪಿಸಿದ್ದವು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದರು. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ ಕೆ ಶಿವಕುಮಾರ್, ನನ್ನ ನಾಮಿನೇಷನ್ ಅತಿ ಹೆಚ್ಚು ಡೌನ್‌ಲೋಡ್ ಆಗಿದೆ. ದೊಡ್ಡ ಲೀಗಲ್ ಟೀಮ್ ಕನಕಪುರದಲ್ಲಿ ನಿಂತುಕೊಂಡಿದೆ. ಯಾಕೆ ಅಷ್ಟು ಡೌನ್‌ಲೋಡ್ ಮಾಡಿಕೊಂಡಿದ್ದಾರೆ? ಇದರ ಅರ್ಥ ನನ್ನ ನಾಮಿನೇಷನ್ ರಿಜೆಕ್ಟ್ ಆಗಬೇಕು ಎಂಬ ಉದ್ದೇಶವಿದೆ ಎಂದರು.
ಬಿಜೆಪಿ, ಸಿಎಂ ಕಚೇರಿ ಮತ್ತು ಲಿಗಲ್ ಟೀಮ್ ಷಡ್ಯಂತ್ರ ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕಾರ ಮಾಡುವ ಪ್ರಯತ್ನ ನಡೀತಾ ಇದೆ. ಕಾಂಗ್ರೆಸ್ ಅಭ್ಯರ್ಥಿಗಳ ನಾಮಿನೇಷನ್ ಡೌನ್‌ಲೋಡ್ ಮಾಡಲಾಗಿದೆ. ಇದರ ಬಗ್ಗೆ ಚುನಾವಣಾ ಆಯೋಗ ಗಮನ ಹರಿಸಬೇಕು. ಸವದತ್ತಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ನಾಮಪತ್ರದಲ್ಲಿ ಸಮಸ್ಯೆ ಇದೆ. ಸಾಕಷ್ಟು ಬಿಜೆಪಿ ಅಭ್ಯರ್ಥಿಗಳ ನಾಮಪತ್ರದಲ್ಲಿ ದೋಷ ಇದೆ ಎಂದು ದೂರಿದರು.
ನನ್ನ ನಾಮಪತ್ರ ರಿಜೆಕ್ಟ್ ಮಾಡುವ ಪ್ರಯತ್ನ ಮಾಡಿದ್ರು. ನನಗೇ ಹೀಗೆ ಆದ್ರೆ ಸಾಮಾನ್ಯ ಅಭ್ಯರ್ಥಿ ಕತೆ ಏನು? ಚುನಾವಣಾ ಆಯೋಗ ಯಾವುದೇ ಒತ್ತಡಕ್ಕೆ ಮಣಿಯಬಾರದು. ನೇರವಾಗಿ ಸಿಎಂ ಕಚೇರಿಯೇ ನಾಮಪತ್ರ ಡೌನ್‌ಲೋಡ್ ಮಾಡುತ್ತಿದೆ. ಸಿಎಂ ಕಚೇರಿಯ ದೂರವಾಣಿ ಮಾಹಿತಿ ತೆಗೆದುಕೊಳ್ಳಿ. ಈ ಕುರಿತು ನೇರವಾದ ಆರೋಪ ಮಾಡ್ತಾ ಇದ್ದೇನೆ. ದಯವಿಟ್ಟು ಇದರ ಬಗ್ಗೆ ತನಿಖೆ ಮಾಡಿಸಿ ಎಂದು ಸಿಎಂ ಕಚೇರಿ ಮೇಲೆ ಡಿ ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದರು.
ಶೋಭಾ ಕರಂದ್ಲಾಜೆ ಆರೋಪಕ್ಕೆ ತಿರುಗೇಟು ನೀಡಿದ ಡಿಕೆಶಿ, ನಾನು ಶೇ.40 ಕಮಿಷನ್ ಹೊಡೆದಿಲ್ಲ. ಬಿಲ್ಡಿಂಗ್ ಫಂಡ್ ಅಂತ ಅಭ್ಯರ್ಥಿಗಳಿಂದ ಟಿಕೆಟ್ ಅರ್ಜಿಗೆ ಹಣ ಪಡೆದಿದ್ದೇವೆ. ನಿಮ್ಮ ಶೇ.40 ಕಮಿಷನ್ಗೆ ಹಲವು ಸಾಕ್ಷಿ ಸಿಕ್ಕಿವೆ. ಮಾಡಾಳ್ ಪ್ರಕರಣವೇ ಇದಕ್ಕೆ ಸಾಕ್ಷಿ ಎಂದರು. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮೇಲೆ ಬಿಜೆಪಿ ನಿಗಾ ಇಟ್ಟ ವಿಚಾರ ಮಾತನಾಡಿ, ಜಗದೀಶ್ ಶೆಟ್ಟರ್ ನಮ್ಮ ನಾಯಕರು. ಸ್ಟಾರ್ ಕ್ಯಾಂಪೆನೇರ್, ಅವರ ವಿರುದ್ಧ ಯಾವ ಷಡ್ಯಂತ್ರ ನಡೆಯಲ್ಲ. ಬಿಜೆಪಿ ಡ್ಯಾಮ್ ಈಗಾಗಲೇ ಒಡೆದು ನೀರು ಹೊರ ಬರ್ತಾ ಇದೆ ಎಂದರು.
ಡಿಕೆಶಿ, ಸಿದ್ದರಾಮಯ್ಯ, ಖರ್ಗೆ ಅವರನ್ನು ಎಂಬಿ ಪಾಟೀಲ್ ಮುಗಿಸುತ್ತಾರೆ ಎಂಬ ಶೋಭಾ ಕರಂದ್ಲಾಜೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಬಿಎಸ್ ಯಡಿಯೂರಪ್ಪ ಅವರನ್ನ ಮುಗಿಸೋಕೆ ಖುದ್ದು ಶೋಭಾ ಕರಂದ್ಲಾಜೆ ಸೇರಿಕೊಂಡು ಅವರ ಪಕ್ಷದಲ್ಲಿ ಏನೇನು ಮಾಡಿದ್ರು ಅಂತಾ ಗೊತ್ತಿದೆ. ಅವರು ನಮ್ಮ ಬಗ್ಗೆ ಡೀಟೇಲ್ ಆಗಿ ಹೇಳಿದ್ರೆ ನಾವು ಕೂಡ ಯಡಿಯೂರಪ್ಪ ಅವರನ್ನ ಮುಗಿಸೋಕೆ ಏನೇನ್ ಪ್ಲಾನ್ ಮಾಡಿದ್ರು ಅನ್ನೋದನ್ನ ಎಲ್ಲವನ್ನು ಬಿಚ್ಚಿಡ್ತೀವಿ ಎಂದು ಕಿಡಿ ಕಾರಿದರು.
ಕಾಂಗ್ರೆಸ್ ಸೇರಿದ ಬಿಜೆಪಿ ನಾಯಕರು: ಬಿಜೆಪಿ ಮುಖಂಡರಾದ ಚಿತ್ತಾಪುರ ಕ್ಷೇತ್ರದ ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಹೆಬ್ಬಾಳ ಹಾಗೂ ಅರವಿಂದ್ ಚೌಹಾಣ್ ಅವರು ತಮ್ಮ ಬೆಂಬಲಿಗರ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಶನಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಇದನ್ನೂ ಓದಿ: ಬೆಂಗಳೂರಲ್ಲಿ ಮಹಿಳಾ ಅಭ್ಯರ್ಥಿಗಳು ಗೆದ್ದಿರುವುದೆಷ್ಟು? ಪುರುಷರಿಗೆ ಸ್ಪರ್ಧೆಯೊಡ್ಡುವರೇ ವುಮನ್ ಕ್ಯಾಂಡಿಡೇಟ್ಸ್!