ಬೆಂಗಳೂರು: 74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಧ್ವಜಾರೋಹಣ ನೆರವೇರಿಸಿದರು.
ಧ್ವಜಾರೋಹಣದ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಿಕೆಶಿ, ಗಾಂಧೀಜಿ ಅವರ ತತ್ವಗಳನ್ನ ನಾವು ಅನುಸರಿಸಬೇಕು. ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟವರನ್ನ ಸ್ಮರಿಸಿಕೊಳ್ಳಬೇಕು. ಅಸಮಾನತೆ ನಿವಾರಿಸಿ ಸಮಾನತೆ ಸಾಧಿಸಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನ ಎತ್ತಿ ಹಿಡಿಯಬೇಕು. ಕಾಂಗ್ರೆಸ್ ಜನ್ಮ ತಾಳಿದ್ದೇ ಸ್ವಾತಂತ್ರ್ಯಕ್ಕಾಗಿ. ದೇಶದ ಐಕ್ಯತೆಯನ್ನ ನಾವು ಉಳಿಸಬೇಕಿದೆ ಎಂದರು.
ಸರ್ಕಾರದ ವಿರುದ್ಧ ಆಕ್ರೋಶ:
ಇಂದು ಸಂವಿಧಾನಕ್ಕೆ ಅಪಚಾರವಾಗುತ್ತಿದೆ. ಸಂವಿಧಾನ ಅಳಿಸುವ ಮೇಲಾಟ ನಡೆದಿದೆ. ಸಂವಿಧಾನದ ಮೇಲೆ ಬಿಜೆಪಿಯವರಿಗೆ ಕನಿಷ್ಠ ಬೆಲೆಯಿಲ್ಲ. ಸಂವಿಧಾನ ಸುಡಲು ಹೊರಟವರು ಅವರು. ಕೋಮುವಾದಿಗಳಿಂದ ಸ್ವಾತಂತ್ರ್ಯ ಪಡೆಯಬೇಕಿದೆ. ಕೋಮುವಾದ, ದ್ವೇಷದ ಬೀಜ ಬಿತ್ತುತ್ತಿದ್ದಾರೆ. ಇಂತಹ ವಾತಾವರಣವನ್ನು ಬಿಜೆಪಿ ಸೃಷ್ಟಿಸುತ್ತಿದೆ. ಈ ವಿಷ ಬೀಜವನ್ನ ನಾವು ಕಿತ್ತುಹಾಕಬೇಕಿದೆ ಎಂದರು.
ನಾವು ಹೋರಾಟದ ಮೂಲಕವೇ ಸ್ವಾತಂತ್ರ್ಯ ಪಡೆಯಬೇಕಿದೆ. ದೇಶದಲ್ಲಿನ ತಿಕ್ಕಾಟವನ್ನ ತಡೆಯಬೇಕಿದೆ. ರಾಷ್ಟ್ರದಲ್ಲಿ ಮತ್ತೊಂದು ಬದಲಾವಣೆ ತರಬೇಕಿದೆ. ಮುಂದಿನ ದಿನದಲ್ಲಿ ಕೆಂಪು ಕೋಟೆಯಲ್ಲಿ ನಾವು ಭಾಷಣ ಮಾಡುತ್ತೇವೆ. ನಮ್ಮ ಪಕ್ಷವೇ ಅಧಿಕಾರ ಹಿಡಿಯಲಿದೆ. ಅದಕ್ಕೆ ನಾವು ಇಲ್ಲಿಂದಲೇ ಧ್ವನಿ ನೀಡಬೇಕಿದೆ. ಯುವ ಜನತೆಯ ಮೂಲಕ ಹೋರಾಟ ಮಾಡಬೇಕಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಕೆಶಿ ಕರೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಸಮಾರಂಭದಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ದಿನೇಶ್ ಗುಂಡೂರಾವ್, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ನಸೀರ್ ಅಹ್ಮದ್, ನಾರಾಯಣಸ್ವಾಮಿ ಭಾಗಿಯಾಗಿದ್ದರು.