ಬೆಂಗಳೂರು: ಬಿಜೆಪಿ ಸರ್ಕಾರದ ನಡೆಗಳನ್ನು ವಿರೋಧಿಸಿ ಗೀತೆಗಳುಳ್ಳ ಆಡಿಯೋ-ವಿಡಿಯೋ ಸಿಡಿಯನ್ನು ಬೆಂಗಳೂರಿನ ಮೌರ್ಯ ಹೋಟೆಲ್ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುರುವಾರ ಬಿಡುಗಡೆ ಮಾಡಿದರು.
ಆಡಿಯೋ-ವಿಡಿಯೋ ಸಿಡಿಯಲ್ಲಿ ನಾಲ್ಕು ವೀಡಿಯೋ ಸಾಂಗ್ಗಳಿವೆ. ಮೊದಲನೆಯದು ಡಿಕೆಶಿ ಜನರ ವಿಶ್ವಾಸಿ ಎಂಬುದಾಗಿದೆ. ಕಪ್ಪು ಹಣ ತರ್ತೀನಿ ಅಂತ ತಿಪ್ಪೆ ಸಾರ್ಸಿದ್ರು (ಬಿಜೆಪಿ ಸರ್ಕಾರದ ವಿರುದ್ಧದ ಹಾಡು) ಎರಡನೇಯದು, ಮೂರನೇಯದು ಜನರಿಗೆ ಬೇಕಿದೆ ಕಾಂಗ್ರೆಸ್, ಜನರ ಧ್ವನಿಯಾಗಿದೆ ಕಾಂಗ್ರೆಸ್ ಹಾಗೂ ಡಿಕೆ ನಮ್ ಡಿಕೆ, ಈ ಜನರ ಧ್ವನಿಯಾಗಿದೆ ಜೋಕೆ ಎಂಬುದು ನಾಲ್ಕನೆಯ ಹಾಡಾಗಿದೆ. ಕವಿಕಾ ಮಾಜಿ ಅಧ್ಯಕ್ಷ ಮನೋಹರ್ ನೇತೃತ್ವದಲ್ಲಿ ಹಾಡುಗಳ ರಚನೆ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಸಲೀಂ ಅಹಮದ್ ಮಾತನಾಡಿ, ಡಿ. ಕೆ.ಶಿವಕುಮಾರ್ ಅವರು ಪಕ್ಷದ ಕಾರ್ಯಕರ್ತರಾಗಿ ಕಳೆದ 7 ತಿಂಗಳಿಂದ ಪಕ್ಷವನ್ನು ಬಲವಾಗಿ ಸಂಘಟಿಸಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಕಾರ್ಯಕರ್ತರು ತಲೆ ತಗ್ಗಿಸುವ ಕೆಲಸ ಮಾಡುವುದಿಲ್ಲ. ಬಿಜೆಪಿಯ ಮುಂಚೂಣಿ ಘಟಕಗಳಾದ ಸಿಬಿಐ, ಇಡಿ ಮೂಲಕ ದಾಳಿ ಮಾಡಿಸಿದ್ದಾರೆ. ಬ್ರಿಟಿಷರಿಗೆ ಹೆದರದ ಕಾಂಗ್ರೆಸ್ ಬಿಜೆಪಿಗೆ ಹೆದರುತ್ತಾ?, ಉಪ ಚುನಾವಣೆ ಸೋಲುವ ಭೀತಿಯಿಂದ ಬಿಜೆಪಿ ಕೊರೊನಾ ಭ್ರಷ್ಟಾಚಾರ, ವಿಜಯೇಂದ್ರ ಕಮಿಷನ್ ಆರೋಪದ ಬಗ್ಗೆ ಉತ್ತರ ನೀಡಲಾಗದೆ ಜನರ ಗಮನ ಬೇರೆಡೆ ಸೆಳೆಯುವ ಕೆಲಸ ಮಾಡುತ್ತಿದೆ ಎಂದರು.
ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಸಿಡಿಯಲ್ಲಿ ಮೋದಿಯವರ 6 ವರ್ಷದ ಚರಿತ್ರೆ ಇದೆ. ಹುಚ್ಚನಿಗೆ ಹೆಣ್ಣು ಕೊಡಬಾರದು. ಸನ್ಯಾಸಿಗೆ ರಾಜ್ಯ ಕೊಡಬಾರದು ಅಂತ ಹೇಳ್ತಾರೆ. ಉತ್ತರ ಪ್ರದೇಶದಲ್ಲಿ ಸನ್ಯಾಸಿಗೆ ಅಧಿಕಾರ ಕೊಟ್ಟು ಇಡಿ ದೇಶವನ್ನು ಹಾಳು ಮಾಡುತ್ತಿದ್ದಾರೆ. ಯುಪಿಯಲ್ಲಿ ಯುವತಿ ಮೇಲಿನ ಅತ್ಯಾಚಾರ ಮುಚ್ಚಿ ಹಾಕುವ ಎಲ್ಲ ಪ್ರಯತ್ನ ನಡೆಯುತ್ತಿದೆ. ಮೋದಿ ಮದುವೆಯಾಗಿಯೂ ಸನ್ಯಾಸಿ. ಅವರ ಕೈಗೆ ದೇಶ ಕೊಟ್ಟು ದೇಶದ ಸ್ಥಿತಿ ಹೀಗಾಗಿದೆ ಎಂದರು.
ಕೊಟ್ಟ ಭರವಸೆ ಈಡೇರಿಸಿದ್ದಾರಾ?:
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ ಮಾತನಾಡಿ, ದೇಶದಲ್ಲಿ ದೊಡ್ಡ ಸರ್ಕಾರ ಇದೆ. ಅವರು ನುಡಿದಂತೆ ನಡೆದಿದ್ದಾರಾ? ಜನರಿಗೆ ಕೊಟ್ಟ ಭರವಸೆ ಈಡೇರಿಸಿದ್ದಾರಾ?, ಮೋದಿ ಸರ್ಕಾರ ಬಂದು 6 ವರ್ಷ ಆಯ್ತು ಏನು ಮಾಡಿದರು. ದೇಶದ ಜನರಿಗೆ ಉದ್ಯೋಗ ನೀಡಿದ್ದರಾ?, ರೈತ ಉಳಿದ್ನಾ, ಕಾರ್ಮಿಕ ಉಳಿದ್ನಾ, ದೇಶದ ಗಡಿ ಉಳೀತಾ?, ದೇಶಕ್ಕೆ ಏನ್ ಮಾಡಿದ್ದಾರೆ ಅನ್ನುವುದನ್ನು ಬಿಜೆಪಿಯವರು ಹೇಳಬೇಕು. ಕೊರೊನಾ ಸಂದರ್ಭದಲ್ಲಿ ಈ ಸರ್ಕಾರ ಯಾರನ್ನೂ ಕಾಪಾಡಲಿಲ್ಲ. ಚಿಕ್ಕ ಮಕ್ಕಳಿಗೂ ಬದುಕುವ ನಂಬಿಕೆ ಉಳಿದಿಲ್ಲ. ಎಲ್ಲರಿಗೂ ಭಯ ಮೂಡಿದೆ ಎಂದರು.
ಉಪ ಚುನಾವಣೆ ನಾಮಪತ್ರ ಸಲ್ಲಿಕೆ:
ಚುನಾವಣೆಗೆ ಅಧಿಕೃತ ನೋಟಿಫಿಕೇಶನ್ ಆದ ಮೇಲೆ ಅಕ್ಟೋಬರ್ 14ಕ್ಕೆ ಆರ್ಆರ್ ನಗರ ಹಾಗೂ 15 ರಂದು ಶಿರಾದಲ್ಲಿ ನಾಮಪತ್ರ ಸಲ್ಲಿಕೆ ಮಾಡುತ್ತೇವೆ. ಕೊರೊನಾ ವಿಚಾರದಲ್ಲಿ ನಿಯಮ ಪಾಲನೆ ಮಾಡಬೇಕಿದೆ. ಶಿರಾದಲ್ಲಿ ರಾಕೇಶ್ ಗೌಡ ಯಾರು ಅಂತ ಗೊತ್ತಿಲ್ಲ. ಯುವಕರು ಯಾರಿದ್ದಾರಾ ಅಂತ ಕೇಳಿದ್ರು. ನಾವು ಎಐಸಿಸಿಗೆ ಪ್ಯಾನಲ್ ಕಳಿಸುತ್ತೇವೆ. ಈ ಬಾರಿ ಜಯಚಂದ್ರ ಹೆಸರಷ್ಟೇ ಕಳುಹಿಸಿದ್ದು, ಎರಡೂ ಕ್ಷೇತ್ರದಲ್ಲಿ ಒಂದೇ ಹೆಸರು ಸೇರಿಸಿಕೊಂಡಿದ್ದೇವೆ. ಕುಸುಮಾ ಆಯ್ಕೆ ಮಾಡುವ ಮೊದಲು ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನಿಸಿದ್ದೇನೆ.
ನಾನು ಭ್ರಷ್ಟನೋ, ತತ್ವಜ್ಞಾನಿನೋ ಅನ್ನೋದನ್ನು ಅವರೇ ಬಹಿರಂಗ ಪಡಿಸಲಿ. ಅವರ ಪಕ್ಷದಲ್ಲಿ ಬಂಗಾರು ಲಕ್ಷ್ಮಣ್ ಅವರಿಂದ ಹಿಡಿದು ಅವರ ಶಾಸಕರವರೆಗೂ ಏನೇನ್ ಆಗಿದೆ ಎಲ್ಲವನ್ನೂ ಹೇಳಲಿ. ಸಿ.ಟಿ.ರವಿ ದೆಹಲಿಗೆ ಹೋಗಿದಾರೆ. ಅವರಿಗೆ ನನ್ನ ಹೆಸರು ಹೇಳಿಸಿದರೆ ದೆಹಲಿಯಲ್ಲಿ ಮಾರ್ಕೆಟ್ ಆಗುತ್ತೆ. ಕೆಲವರು ನನ್ನ ಹೆಸರು ಹೇಳಿ ಮಾರ್ಕೆಟ್ ಮಾಡ್ಕೊಳ್ತಾರೆ. ಸಿ.ಟಿ ರವಿಯವರು ಈಗ ನನ್ನ ಹೆಸರು ಹೇಳಿ ದಿಲ್ಲಿಯಲ್ಲಿ ಮಾರ್ಕೆಟ್ ಮಾಡ್ಕೊಳ್ತಿದಾರೆ ಎಂದರು.
ರಾಜರಾಜೇಶ್ವರಿ ನಗರ ಟಿಕೆಟ್ ಕುಸುಮಾ ಅವರಿಗೆ ನೀಡಿದ್ದಕ್ಕೆ ಯಾವುದೇ ಅಸಮಾಧಾನ ಇಲ್ಲ. ಎಲ್ಲ ಆಕಾಂಕ್ಷಿಗಳ ಜತೆ ಮಾತನಾಡಿದ್ದೇನೆ. ಉಪಚುನಾವಣೆ ಅಷ್ಟೇ ಅಲ್ಲ, ಪರಿಷತ್ ಚುನಾವಣೆಗೂ ಅಭ್ಯರ್ಥಿ ಆಯ್ಕೆ ಮಾಡುವಾಗ ನಾನು ಬೆಂಗಳೂರು ಮತ್ತು ಸುತ್ತಮುತ್ತ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಮೇಯರ್ ರಾಮಚಂದ್ರಪ್ಪ, ಯುವ ಮುಖಂಡರಾದ ಎಸ್. ಮನೋಹರ್ ಹಾಗು ಸಲೀಂ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.