ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಅವರು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಬೆಂಗಳೂರು ಮಳೆ ಹಾನಿ ಬಗ್ಗೆ ಚರ್ಚೆ ನಡೆಸಿದರು.
ನಗರದಲ್ಲಿ ಶುಕ್ರವಾರ ಭೇಟಿ ಮಾಡಿ, ಇತ್ತೀಚಿನ ಮಳೆಯಿಂದ ಪ್ರವಾಹ ಪರಿಸ್ಥಿತಿ ಏರ್ಪಟ್ಟು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಇದರಿಂದ ಜನರು ಮತ್ತು ಸವಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಾಮನಗರ, ಚನ್ನಪಟ್ಟಣ, ಮಂಡ್ಯ ಬಳಿಯ ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯನ್ನು ಸರಿಪಡಿಸುವಂತೆ, ಕನಕಪುರ ಸಮೀಪ ಅರ್ಕಾವತಿ ನದಿಗೆ ಪರ್ಯಾಯ ಸೇತುವೆ ನಿರ್ಮಾಣ ಹಾಗೂ ಕನಕಪುರ ನಗರ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಬೆಂಗಳೂರಿನ ವಿವಿಧಡೆಗಳಲ್ಲಿ ಕಳೆದ ಒಂದು ವಾರದಿಂದ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರು ಹೆಚ್ಚಿರುವ ಸ್ಥಳದಲ್ಲಿಯೇ ಸಮಸ್ಯೆ ಕಾಡಿದೆ. ವಾಹನಗಳು ನೀರಲ್ಲಿ ಮುಳುಗಿವೆ. ಮನೆಗಳಿಗೂ ನೀರು ನುಗ್ಗಿದ್ದು ಪೀಠೋಪಕರಣಗಳು ಹಾಳಾಗಿವೆ. ಸಾಕಷ್ಟು ಸಾವು-ನೋವುಗಳು ಸಹ ಸಂಭವಿಸಿದ್ದು, ರಸ್ತೆ ಚರಂಡಿ ಹಾಗೂ ರಾಜ ಕಾಲುವೆ ಸೇರಿದಂತೆ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ವಿವರಿಸಿದರು.
ಇದಲ್ಲದೆ ಹಳೆ ಮೈಸೂರು ಭಾಗದಲ್ಲಿ ಸಹ ಕಳೆದ ಕೆಲವು ವರ್ಷಗಳಲ್ಲಿ ಕಾಣದ ಪ್ರಮಾಣದಲ್ಲಿ ಮಳೆಯಾಗಿದೆ. ಆಸ್ತಿಪಾಸ್ತಿ ನಷ್ಟವಾಗಿದ್ದು, ರೈತರು ಬೆಳೆ ಕಳೆದುಕೊಂಡಿದ್ದಾರೆ. ಎಲ್ಲದಕ್ಕೂ ಸಾಧ್ಯವಾದಷ್ಟು ಬೇಗ ಗಮನ ಹರಿಸಿ ಪರಿಹಾರ ಧನ ಬಿಡುಗಡೆ ಮಾಡುವಂತೆ ಡಿ ಕೆ ಶಿವಕುಮಾರ್ ಹಾಗೂ ಡಿ ಕೆ ಸುರೇಶ್ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಮನವಿ ಮಾಡಿದ್ದಾರೆ. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಉಪಸ್ಥಿತರಿದ್ದರು.
ಓದಿ: ಬೆಂಗಳೂರಿನಲ್ಲಿ ಸ್ಕೈಬಸ್ ವ್ಯವಸ್ಥೆ, ಮೂರು ತಿಂಗಳಲ್ಲಿ ಅಧ್ಯಯನ ವರದಿಗೆ ಸೂಚನೆ: ನಿತಿನ್ ಗಡ್ಕರಿ..!