ಬೆಂಗಳೂರು: ಬದ್ಮಾಷ್ ಹ್ಯಾಂಗೋವರ್ ಪಬ್ನಲ್ಲಿ ಕನ್ನಡ ಹಾಡು ಹಾಕದ ಪ್ರಕರಣ ಸಂಬಂಧ ಡಿಜೆ ಸಿದ್ದಾರ್ಥ್ ಕನ್ನಡಿಗರಲ್ಲಿ ಕ್ಷಮೆ ಕೇಳಿದ್ದಾರೆ.
ಕನ್ನಡ ಹಾಡು ಹಾಕುವ ವಿಚಾರದಲ್ಲಿ ಡಿಜೆ ಸಿದ್ದಾರ್ಥ್ ಮೊನ್ನೆ ರಾತ್ರಿ ಪಬ್ಗೆ ಬಂದಿದ್ದ ಸುಮಿತಾ ಹಾಗೂ ಆಕೆಯ ಸಹೋದರರ ತಂಡದ ನಡುವೆ ಮಾತಿನ ಚಕಮಕಿಯಾಗಿತ್ತು. ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಗಲಾಟೆ ಕಾವು ಹೆಚ್ಚಳವಾಗುತ್ತಿದ್ದಂತೆ ಪಬ್ ಮ್ಯಾನೇಜರ್ ಡಾಮಿನಿಕ್ ಇನ್ನೊಮ್ಮೆ ಹೀಗಾಗದಂತೆ ಭರವಸೆ ನೀಡಿ ಕ್ಷಮೆ ಕೇಳಿದ್ದರು. ಇದರ ಬೆನ್ನಲೇ ಡಿಜೆ ವಿಡಿಯೊ ಮಾಡಿ ಕ್ಷಮೆ ಕೇಳಿದ್ದಾರೆ.
ನಾನು ಹುಟ್ಟಿ ಬೆಳೆದಿದ್ದು ಕರ್ನಾಟಕದಲ್ಲಿಯೇ, ಕಾವೇರಿ ನೀರು ಕುಡಿದು ಬೆಳೆದಿದ್ದೇನೆ. ನನಗೆ ಅತಿ ಹೆಚ್ಚು ಇಷ್ಟವಾಗುವ ಭಾಷೆ ಅಂದರೆ ಕನ್ನಡ. ಪಬ್ನಲ್ಲಿ ಪ್ರತಿ ಬಾರಿಯೂ ಕನ್ನಡ ಹಾಡನ್ನು ಪ್ಲೇ ಮಾಡ್ತೇನೆ. ಪುನೀತ್ ರಾಜ್ ಕುಮಾರ್ ಎಂದರೆ ನನಗೆ ತುಂಬಾ ಇಷ್ಟ. ಬೊಂಬೆ ಹೇಳುತೈತೆ ಹಾಡನ್ನು ಪ್ರತಿ ಬಾರಿಯೂ ಪ್ಲೇ ಮಾಡ್ತೇನೆ. ನಿನ್ನೆ ತಡವಾಗಿದ್ದರಿಂದ ಕನ್ನಡ ಹಾಡು ಹಾಕಲು ಸಾಧ್ಯವಾಗಿಲ್ಲ. ಏಕಾಏಕಿ 12.30 ಕ್ಕೆ ಪಬ್ ಕ್ಲೋಸ್ ಮಾಡಲು ಹೇಳಿದ್ದರು. ಹಾಗಾಗಿ ಕನ್ನಡ ಹಾಡು ಹಾಕಲು ಸಾಧ್ಯವಾಗಿಲ್ಲ.
ಕನ್ನಡ ಹಾಡು ಪ್ಲೇ ಮಾಡದಿದ್ದಕ್ಕೆ ನಾನು ಕ್ಷಮೆ ಕೇಳ್ತೇನೆ ಎಂದ ಡಿಜೆ, ಸುಮಿತಾ ಹಾಗೂ ಸ್ನೇಹಿತರು ಮಾಡ್ತಿರುವ ಆರೋಪ ಸುಳ್ಳು. ಮ್ಯೂಸಿಕ್ ಸಿಸ್ಟಂ ಆಫ್ ಮಾಡಿದ ಮೇಲೆ ಕನ್ನಡ ಹಾಡು ಯಾಕೆ ಹಾಕಿಲ್ಲ ಅಂದ್ರು. ಮೊದಲು ಅವರು ಕನ್ನಡ ಹಾಡು ಹಾಕಲು ಕೇಳಿಲ್ಲ. ಸಿಸ್ಟಂ ಆಫ್ ಆಗಿದ್ರಿಂದ ಮತ್ತೆ ಪ್ಲೇ ಮಾಡಲು ಕಷ್ಟವೆಂದೆ. ಆ ವೇಳೆ 10 ಜನ ನಿರಂತರವಾಗಿ ಬೈಯುತ್ತಲೇ ಇದ್ರು. ಕೆಟ್ಟದಾಗಿ ಬೈದಾಗ ನಾನು ಒಂದೆರಡು ಮಾತು ಬೈದಿದ್ದೇನೆ. ಡಿಜೆಗೆ ಕನ್ನಡ ಬರಲ್ಲ ಎಂದು ಅವರು ಹೇಳಿದ್ದಾರೆ. ನಾನು ಕನ್ನಡದಲ್ಲೇ ಅವರ ಹತ್ತಿರ ಮಾತಾಡಿದ್ದೇನೆ. ಸಮಯ ಬಂದಾಗ ನಾನು ಮಾಧ್ಯಮಕ್ಕೆ ಬಂದು ಮಾತಾಡ್ತೇನೆ ಎಂದಿದ್ದಾರೆ.