ಬೆಂಗಳೂರು: ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಮಾಜಿ ಕಾರ್ಪೋರೇಟರ್ ಅಬ್ದುಲ್ ರಕೀಬ್ ಜಾಹೀರ್ನನ್ನು ಬಂಧಿಸಬೇಕೆಂದು ಸಿಸಿಬಿ ಸಿದ್ಧತೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿ, ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಸಂಬಂಧಿಸಿದ ತನಿಖೆಯ ವಿಚಾರವನ್ನು ಎಳೆ ಎಳೆಯಾಗಿ ಉಲ್ಲೇಖಿಸಿದ್ದಾರೆ. ಮತ್ತೊಂದೆಡೆ ಗಲಭೆಯ ಹಿಂದೆ ಎಸ್ಡಿಪಿಐ ಮುಖಂಡರು ಹಾಗೂ ಭಯೋತ್ಪಾದಕರ ನಂಟು ಇರುವ ಆರೋಪದ ಜಾಡಿನ ತನಿಖೆಯನ್ನು ಎನ್ಐಎ ಚುರುಕುಗೊಳಿದೆ.
ನಿನ್ನೆ ಶಾಸಕರಾದ ಜಮೀರ್ ಅಹಮ್ಮದ್ ಹಾಗೂ ರಿಜ್ವಾನ್ ಹರ್ಷದ್ ಅವರ ಹೇಳಿಕೆ ಪಡೆದಿದ್ದ ಎನ್ಐಎ ಗಲಭೆಯ ಕೆಲ ಮಾಹಿತಿಗಳನ್ನು ಕಲೆಹಾಕಿತ್ತು. ಸದ್ಯ ಗಲಭೆಯಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಅವರ ಪಾತ್ರದ ಬಗ್ಗೆ ಸಿಸಿಬಿ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದಾರೆ. ಈ ಕಾರಣಕ್ಕಾಗಿ ತನಿಖೆ ನಡೆಸಿದ ಸಿಸಿಬಿ ಹೆಚ್ಚುವರಿ ಆಯುಕ್ತರು ಹಾಗೂ ಸಿಸಿಬಿ ಡಿಸಿಪಿಗಳ ಬಳಿಯಿಂದ ಕೂಡ ಎನ್ಐಎ ಮಾಹಿತಿ ಪಡೆಯಲು ನಿರ್ಧಾರ ಮಾಡಿದೆ. ಈಗಾಗಲೇ ಘಟನೆ ನಡೆದ ವೇಳೆ ಇದ್ದ 18 ಪೊಲೀಸರ ಹೇಳಿಕೆಯನ್ನ ಕೂಡ ಎನ್ಐಎ ಪಡೆದಿದೆ.
ಹಾಗೆಯೇ ಸಿಸಿಬಿ ಪೊಲೀಸರು ಕೂಡ ಸದ್ಯ ಮಾಜಿ ಮೇಯರ್ ಸಂಪತ್ ರಾಜ್ ಹಾಗೂ ಮಾಜಿ ಕಾರ್ಪೋರೇಟರ್ ಅಬ್ದುಲ್ ರಕೀಬ್ ಜಾಹೀರ್ನನ್ನು ಬಂಧಿಸಬೇಕೆಂದು ನಿರ್ಧರಿಸಿದ್ದಾರೆಂಬ ಮಾಹಿತಿ ತಿಳಿದು ಬಂದಿದೆ. ಸಂಪತ್ ರಾಜ್ ಖಾಸಗಿ ಆಸ್ಪತ್ರೆಯಲ್ಲಿರುವ ಕಾರಣ ಆರೋಗ್ಯದ ಸ್ಥಿತಿಗತಿ ಬಗ್ಗೆ ವೈದ್ಯರ ಬಳಿ ಮಾಹಿತಿ ಪಡೆಯುತ್ತಿದ್ದು, ಆರೋಗ್ಯ ಚೇತರಿಕೆ ಕಂಡ ಕೂಡಲೇ ವಶಕ್ಕೆ ಪಡೆದು ತನಿಖೆ ನಡೆಸಲಿದ್ದಾರೆ. ಸಿಸಿಬಿ ಬಂಧನ ಬಳಿಕ ಸಂಪತ್ ರಾಜ್ ಎನ್ಐಎ ತನಿಖೆ ಎದುರಿಸುವುದು ಅನಿವಾರ್ಯವಾಗಿದೆ. ಸಂಪತ್ ಎಸ್ಡಿಪಿಐ ಮುಖಂಡರ ಜೊತೆ ನಿರಂತರ ಸಂಪರ್ಕದಲ್ಲಿರುವುದು ತನಿಖೆ ವೇಳೆ ಬಯಲಾಗಿದೆ. ಹಾಗಾಗಿ ತನಿಖೆ ಚುರುಕುಗೊಂಡಿದೆ.