ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ಸಿಸಿಬಿ ತನಿಖಾಧಿಕಾರಿಗಳು ನಗರದ 33ನೇ ಎಸಿಎಂಎಂ ಕೋರ್ಟ್ ಗೆ 850 ಪುಟಗಳ ಮಧ್ಯಂತರ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಪೊಲೀಸರು ಸಲ್ಲಿಸಿರುವ ಮೊದಲ ಚಾರ್ಜ್ಶೀಟ್ ನಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಆರೋಪಿ 51 ಹಾಗೂ ಮಾಜಿ ಕಾರ್ಪೋರೇಟರ್ ಜಾಕೀರ್ ಅವರನ್ನು ಆರೋಪಿ 52 ಆಗಿ ನಮೂದಿಸಲಾಗಿದೆ. ಈ ಸಂಬಂಧ ಸಲ್ಲಿಸಿರುವ 850 ಪುಟಗಳ ವಿವರಣೆಯಲ್ಲಿ 30ಕ್ಕೂ ಹೆಚ್ಚು ಸಾಕ್ಷಿದಾರರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಟೆಕ್ನಿಕಲ್ ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನೂ ವಿವರಿಸಲಾಗಿದೆ.
ಅಲ್ಲದೇ, ಶಾಸಕ ಅಖಂಡ ಶ್ರೀನಿವಾಸ್ ಅವರ ನಿವಾಸಕ್ಕೆ ಬೆಂಕಿ ಇಡುವಲ್ಲಿ ಆರೋಪಿಗಳ ಪಾತ್ರವೂ ಇದೆ. ಇವರು ಕುಮ್ಮಕ್ಕು ನೀಡಿದ್ದರಿಂದಲೇ ಘಟನೆಯ ಮುಖ್ಯ ಆರೋಪಿಗಳು ಕೃತ್ಯಕ್ಕೆ ಮುಂದಾಗಿದ್ದರು ಎಂಬ ಅಂಶಗಳನ್ನು ವಿವರಿಸಲಾಗಿದೆ. ಮಧ್ಯಂತರ ದೋಷಾರೋಪ ಪಟ್ಟಿಯಲ್ಲಿ ಒಟ್ಟು 52 ಮಂದಿ ವಿರುದ್ಧ ಆರೋಪ ಹೊರಿಸಲಾಗಿದ್ದು ಇನ್ನುಳಿದವರ ವಿರುದ್ಧ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಲಾಗಿದೆ.
ಆದರೆ, ಸಂಪತ್ ರಾಜ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿರುವ ಪೊಲೀಸರು ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರು ನೀಡಿರುವ ವೈದ್ಯಕೀಯ ವರದಿಯನ್ನೂ ಲಗತ್ತಿಸಿದ್ದಾರೆ. ಅವರಿಗಿನ್ನೂ ಕೋವಿಡ್ ಲಕ್ಷಣಗಳು ಕಮ್ಮಿಯಾಗಿಲ್ಲ. ಇದಲ್ಲದೇ ಇನ್ನಿತರ ಆರೋಗ್ಯ ಸಮಸ್ಯೆಗಳಿವೆ ಎಂದು ವೈದ್ಯರು ವರದಿ ನೀಡಿದ್ದಾರೆ.