ಬೆಂಗಳೂರು: ಡಿ.ಜೆ.ಹಳ್ಳಿ ಗಲಭೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಆರೋಪಿಗಳ ಮನೆ, ಕಚೇರಿ ಸೇರಿದಂತೆ ಏಕಕಾಲಕ್ಕೆ ನಗರದ 30 ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಈ ವೇಳೆ ಪ್ರಮುಖ ಆರೋಪಿ 44 ವರ್ಷದ ಸಯ್ಯದ್ ಸಾಧೀಕ್ ಆಲಿ ಎಂಬಾತನನ್ನು ಬಂಧಿಸಿದ್ದಾರೆ.
ಆಗಸ್ಟ್ 11 ರಂದು ಗಲಭೆಯಲ್ಲಿ ಭಾಗಿಯಾಗಿ ಪರಾರಿಯಾಗಿದ್ದ ಆರೋಪಿಯನ್ನು ಎನ್ಐಎ ಬಂಧಿಸಿದೆ. ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಈಶಾನ್ಯ, ಪೂರ್ವ, ಉತ್ತರ ವಿಭಾಗಗಳಿಂದ ಆರೋಪಿಗಳು ಭಾಗಿಯಾಗಿದ್ದರು. ಅಲ್ಲದೆ ಬಂಧಿತರಲ್ಲಿ 30ಕ್ಕೂ ಹೆಚ್ಚು ಮಂದಿ ಉಗ್ರರೊಂದಿಗೆ ನಂಟು ಹೊಂದಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.
ಈ ಹಿನ್ನೆಲೆ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ಗಳ ಆಧಾರದ ಮೇಲೆ ನಗರದ 30 ಕಡೆಗಳಿಗೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿ ಏರ್ ಗನ್, ಶಾರ್ಪ್ ವೆಪನ್ಸ್, ಕಬ್ಬಿಣದ ರಾಡ್, ಡಿವಿಆರ್ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಐಜಿಪಿ ದರ್ಜೆಯ ಅಧಿಕಾರಿ, ಪೊಲೀಸ್ ಆರಕ್ಷಕರು, ಡಿವೈಎಸ್‌ಪಿಗಳು, ಇನ್‌ಸ್ಪೆಕ್ಟರ್ ಮತ್ತು ಸಿಬ್ಬಂದಿಗಳು ಗಲಭೆ ಪ್ರಕರಣದ ತನಿಖಾ ತಂಡದಲ್ಲಿದ್ದು, ಘಟನಾ ಸ್ಥಳ, ಆರೋಪಿಗಳ ಮನೆ, ಕಚೇರಿ, ಸೇರಿದಂತೆ ಹಲವು ಕಡೆಗಳಿಗೆ ದಾಳಿ ನಡೆಸಿ ನಂತರ ಡಿ.ಜೆ.ಹಳ್ಳಿ ಠಾಣೆಗೆ ಭೇಟಿ ನೀಡಿ ಪೊಲೀಸರೊಂದಿಗೆ ಚರ್ಚೆ ನಡೆಸಿದ್ದಾರೆ.