ಬೆಂಗಳೂರು: ಡಿ.ಜಿ.ಹಳ್ಳಿ ಗಲಭೆ ಪ್ರಕರಣ ಸಂಬಂಧ ಈಗಾಗಲೇ ವಶಕ್ಕೆ ಪಡೆದುಕೊಂಡಿರುವ ಐ-ಪೋನ್ ರಿಟ್ರೈವ್ ಮಾಡುವುದೇ ಸಿಸಿಬಿ ತಾಂತ್ರಿಕ ಅಧಿಕಾರಿಗಳಿಗೆ ತಲೆ ನೋವಾಗಿದೆ.
ಗಲಭೆ ಹಿಂದೆ ಸಂಪತ್ ರಾಜ್ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ರಾಜಕೀಯ ವೈಷಮ್ಯ ಹಿನ್ನೆಲೆಗೆ ಗಲಭೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಗಲಭೆಗೆ ಕುಮ್ಮಕ್ಕು ನೀಡಿದ ಶಂಕೆ ಮೇರೆಗೆ ಗಲಭೆ ಪ್ರಕರಣದಲ್ಲಿ ಕಳೆದ ಆಗಸ್ಟ್ 18ರಂದು ಸಂಪತ್ ರಾಜ್ ಹಾಗೂ ಫ್ರೇಜರ್ ಟೌನ್ ವಾರ್ಡ್ ಕಾರ್ಪೋರೇಟರ್ ಜಾಕೀರ್ ಹುಸೇನ್ಗೆ ನೋಟಿಸ್ ಜಾರಿ ಮಾಡಿದ್ದ ಸಿಸಿಬಿ ತನಿಖಾಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಸಂಪತ್ ರಾಜ್ ಬಳಸುತ್ತಿದ್ದ ಐಪೋನ್ ವಶಕ್ಕೆ ಪಡೆದುಕೊಂಡು ಸಿಸಿಬಿ ಟೆಕ್ನಿಕಲ್ ಸೆಂಟರ್ಗೆ ಕಳುಹಿಸಲಾಗಿತ್ತು.
ಐಪೋನ್ ಕಂಪೆನಿಯ ಲೇಟೆಸ್ಟ್ ವರ್ಷನ್ ಆಗಿದ್ದರಿಂದ ರಿಟ್ರೈವ್ ಮಾಡಲು ಕಷ್ಟವಾಗುತ್ತಿದೆ. ರಿಟ್ರೈವ್ಗಾಗಿ ಕೇರಳದ ತಿರುವನಂತಪುರಕ್ಕೆ ಮೊಬೈಲ್ ಕಳುಹಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ ಸಿಸಿಬಿ ತಾಂತ್ರಿಕ ಅಧಿಕಾರಿಗಳೇ ರಿಟ್ರೈವ್ ಮಾಡಲು ತೀರ್ಮಾನಿಸಿದ್ದಾರೆ. ಆದರೆ ಮೊಬೈಲ್ ಹೊಸ ಆವೃತ್ತಿಯಾಗಿದ್ದರಿಂದ ಯಾವ ಸಾಫ್ಟ್ವೇರ್ ಅಳವಡಿಸಿಕೊಂಡು ರಿಟ್ರೈವ್ ಆಗುವುದಕ್ಕೆ ಸಾಧ್ಯ ಎಂದು ತಾಂತ್ರಿಕ ತಜ್ಞರ ಜೊತೆ ಮಾತುಕತೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಸಂಪತ್ ರಾಜ್ಗೆ ಮತ್ತೊಮ್ಮೆ ನೋಟಿಸ್ ನೀಡಿದ್ದರು. ಆದರೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿ ನವೀನ್, ಧರ್ಮವೊಂದರ ಪ್ರವಾದಿ ವಿರುದ್ಧ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ. ಇದರಿಂದ ಅಸಮಾಧಾನಗೊಂಡ ಗಲಭೆಕೋರರು ಕಾವಲ್ ಬೈರಸಂದ್ರದಲ್ಲಿರುವ ಶಾಸಕರ ಮನೆ, ಡಿ.ಜಿ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣೆಗಳನ್ನು ಧ್ವಂಸಗೊಳಿಸಿದ್ದರು.