ಬೆಂಗಳೂರು: ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆಯಲ್ಲಿ ಉಂಟಾದ ನಷ್ಟ ಅಂದಾಜಿಸಲು ಹಾಗೂ ಹೊಣೆಗಾರಿಕೆ ನಿಗದಿಪಡಿಸಿ ಸಂತ್ರಸ್ತರಿಗೆ ಪರಿಹಾರ ಕೊಡಿಸಲು, ನಿವೃತ್ತ ನ್ಯಾ. ಎಚ್.ಎಸ್ ಕೆಂಪಣ್ಣ ಅವರನ್ನು ಕ್ಲೇಮ್ ಕಮಿಷನರ್ ಆಗಿ ನೇಮಕ ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ.
ನಷ್ಟ ವಸೂಲಿಗೆ ಕ್ಲೇಮ್ ಕಮಿಷನರ್ ನೇಮಕ ಮಾಡುವಂತೆ ಕೋರಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಕ್ಲೇಮ್ ಕಮಿಷನರ್ ಆಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್.ಕೆಂಪಣ್ಣ ಅವರು ಕಾರ್ಯನಿರ್ವಹಿಸಲಿದ್ದಾರೆ. ಹೀಗಾಗಿ ಅವರನ್ನು ನೇಮಕಗೊಳಿಸಿದ ಅಧಿಸೂಚನೆಯನ್ನು ಒಂದು ವಾರದೊಳಗೆ ಸರ್ಕಾರ ಹೊರಡಿಸಬೇಕು.
ಕಾರ್ಯ ನಿರ್ವಹಿಸಲು ಕಚೇರಿ, ಅಗತ್ಯ ಸಿಬ್ಬಂದಿ, ವಾಹನ ಮತ್ತು ಎಲ್ಲ ಮೂಲ ಸೌಕರ್ಯಗಳನ್ನು ಕ್ಲೇಮ್ ಕಮಿಷನರ್ ಜತೆ ಸಮಾಲೋಚಿಸಿ ಒದಗಿಸಿಕೊಡಬೇಕು. ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಗೆ ಲಭ್ಯವಿರುವಷ್ಟೇ ಎಲ್ಲ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಕೊರೊನಾ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯಗಳನ್ನು ನೀಡಬೇಕು. ನಷ್ಟ ಅನುಭವಿಸಿರುವ ವ್ಯಕ್ತಿಗಳು ತಮ್ಮ ಮನವಿಗಳನ್ನು ಸಲ್ಲಿಸಲು ಪೂರಕವಾಗಿ ಕ್ಲೇಮ್ ಕಮಿಷನರ್ ನೇಮಕ ಸಂಬಂಧ ಸರ್ಕಾರ ಸಾಕಷ್ಟು ಪ್ರಚಾರ ನೀಡಬೇಕು.
ಕ್ಲೇಮ್ ಕಮಿಷನರ್ ದಾಖಲೆಗಳನ್ನು ತರಿಸಿಕೊಳ್ಳಲು ಅಥವಾ ಸಾಕ್ಷಿಗಳನ್ನು ವಿಚಾರಿಸಲು ಕರೆಸುವ ಅಗತ್ಯವಿದ್ದರೆ ಸಮನ್ಸ್ ಜಾರಿ ಮಾಡಲು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಂದ ನೆರವು ಪಡೆಯಬಹುದು ಎಂದು ಆದೇಶಿಸಿ ವಿಚಾರಣೆಯನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಿತು.