ಬೆಂಗಳೂರು: ಡಿ.ಜೆ. ಹಳ್ಳಿ ಗಲಭೆ ಪ್ರಕರಣವನ್ನು ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿಎಂ ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಆರ್, ಅಶೋಕ್, ಕೇಂದ್ರ ಸಚಿವ ಸದಾನಂದ ಗೌಡ, ಡಿಜಿ ಪ್ರವೀಣ್ ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಭಾಗಿಯಾಗಿದ್ದರು. ಯಾವ ರೀತಿ ತನಿಖೆ ನಡೆಸಬೇಕೆಂದು ಮಹತ್ವದ ಚರ್ಚೆ ನಡೆಸಲಾಯಿತು.
ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಹಾಗೂ ಡಿ.ವಿ. ಸದಾನಂದ ಗೌಡ ಜೊತೆ ಸಭೆ ಸಿಎಂ ಸಭೆ ನಡೆಸಿ ಪರಿಸ್ಥಿತಿ ಅವಲೋಕನ ಮಾಡಿದರು. ಎಲ್ಲ ಆಯಾಮದಲ್ಲಿಯೂ ಚರ್ಚಿಸಲಾಯಿತು. ಇಡೀ ಪ್ರಕರಣ, ಬೆಂಕಿ ಹಾಕಿದ್ದು, ಪುಂಡಾಟ ಮಾಡಿದ್ದು ಎಲ್ಲವನ್ನೂ ಚರ್ಚಿಸಿ ಅಂತಿಮವಾಗಿ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ನೇತೃತ್ವದ ತನಿಖೆ ನಡೆಸಲು ನಿರ್ಧಾರ ಕೈಗೊಳ್ಳಲಾಯಿತು ಎಂದರು.
ಇಂತಹ ಘಟನೆಗಳು ನಡೆದ ಸಂದರ್ಭದಲ್ಲಿ ಯಾವ ರೀತಿ ತನಿಖೆ ನಡೆಸಬೇಕೆನ್ನುವ ಕುರಿತು ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮಾರ್ಗಸೂಚಿ ರಚಿಸಿದೆ. ಕಾನೂನು ರೀತಿಯಲ್ಲಿಯೇ ತನಿಖೆ ಆಗಲಿ ಎನ್ನುವ ಕಾರಣಕ್ಕೆ ಮಾನವಹಕ್ಕು ಆಯೋಗದ ಮಾರ್ಗಸೂಚಿಯಂತೆ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ನೇತೃತ್ವದ ತನಿಖೆಗೆ ವಹಿಸಲು ನಿರ್ಧರಿಸಲಾಯಿತು ಎಂದು ಗೃಹ ಸಚಿವರು ತಿಳಿಸಿದರು.