ಬೆಂಗಳೂರು: ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆ ಪ್ರಕರಣವನ್ನ ಪೊಲೀಸರು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡಿದ್ದಾರೆ. ನಿನ್ನೆ ಕೂಡ ನಗರ ಆಯುಕ್ತ ಕಮಲ್ ಪಂತ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳದ ವಾಸ್ತವ ಚಿತ್ರಣ ಪರಿಶೀಲನೆ ಮಾಡಿದ್ದಾರೆ.
ಬಂಧಿತ ಆರೋಪಿಗಳು ಜಾಮೀನಿನ ಮೇಲೆ ಹೊರಗೆ ಬರಬಾರದೆಂದು ಬಂಧಿತರ ಮೇಲೆ UAPA ಕಾಯ್ದೆಯಡಿ ಪ್ರಕರಣ ದಾಖಲಿಸಲು ನ್ಯಾಯಾಲಯದ ಅನುಮತಿ ಪಡೆದಿದ್ದಾರೆ. ಅನ್ಲೈಫುಲ್ ಆ್ಯಕ್ಟಿವಿಟೀಸ್ ಪ್ರಿವೆನ್ಷನ್ ಆ್ಯಕ್ಟ್ ಇದಾಗಿದ್ದು, ಸದ್ಯ ಪ್ರಮುಖ 61 ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಲಾಗಲಿದೆ.
ಗಲಭೆಯಲ್ಲಿ ಮುಂದಾಳತ್ವ ವಹಿಸಿದ್ದ 61 ಜನರ ವಿರುದ್ಧ UAPA ಕಾಯ್ದೆ ಅನ್ವಯವಾಗಲಿದ್ದು, ಈ ಆರೋಪಿಗಳ ಮೇಲೆ ಗೂಂಡಾ ಆ್ಯಕ್ಟ್, ರೌಡಿ ಪಟ್ಟಿ ಹಾಗೆಯೇ ಇತರೆ ಹಲವಾರು ಪ್ರಕರಣಗಳು ದಾಖಲಾಗಿರುವ ಕಾರಣ ಸೆರೆಮನೆ ವಾಸ ಫಿಕ್ಸ್ ಆಗಿದೆ. ಸದ್ಯ ಇನ್ನೂ ಕೂಡ ತಲೆಮರೆಸಿಕೊಂಡ ಆರೋಪಿಗಳಿಗಾಗಿ ಶೋಧ ಮುಂದುವರೆದಿದ್ದು, ತಲೆಮರೆಸಿಕೊಂಡ ಪ್ರಮುಖ ಆರೋಪಿಗಳಿಗೂ ಈ ಕಾಯ್ದೆ ಅನ್ವಯವಾಗಲಿದೆ.