ಬೆಂಗಳೂರು : ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ನಡೆದ ದಾಳಿ ಹಾಗೂ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಅಮಾಯಕ ಆರೋಪಿಗಳು ಹಾಗೂ ವಿದ್ಯಾರ್ಥಿಗಳ ಮೇಲಿನ ಪ್ರಕರಣವನ್ನು ಕೈಬಿಡುವಂತೆ ಶಾಸಕ ತನ್ವೀರ್ ಸೇಠ್ ಅವರು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದರು. ಈ ಪತ್ರವನ್ನು ಆಧರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರು ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದು, ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಒಂದು ಕೋಮಿನ ಕಮ್ಯುನಲ್ ಅಪರಾಧಿಗಳಿಗೆ ನಮ್ಮಲ್ಲಿ ಕ್ಲೀನ್‌ಚಿಟ್ ನೀಡಲಾಗುವುದು ಎಂದು ಬೋರ್ಡ್ ಹಾಕಿಕೊಂಡು ಗೃಹ ಸಚಿವರು ಕಾರ್ಯನಿರ್ವಹಿಸುತ್ತಿರುವಂತಿದೆ ಎಂದು ಟೀಕಿಸಿದೆ. ಉಗ್ರ ಮನಸ್ಥಿತಿಯ ವ್ಯಕ್ತಿಗಳಿಗೆ ಅಮಾಯಕರ ಪಟ್ಟ ಕಟ್ಟಿ ದೇಶವನ್ನು ಸಿರಿಯಾ ಮಾಡುತ್ತೀರಾ ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಸರ್ಕಾರ ಜಿಹಾದಿಗಳ, ಪಿಎಫ್ಐ ಭಯೋತ್ಪಾದಕರ ತಾಳಕ್ಕೆ ಕುಣಿಯುತ್ತಿರುವುದನ್ನು ಈ ಪತ್ರ ರುಜುವಾತುಪಡಿಸುತ್ತಿದೆ. ಜಿಹಾದಿ ಸರ್ಕಾರದ ಎಲ್ಲ ಬಗೆಯ ಹಿಂದೂ ವಿರೋಧಿ ನೀತಿ-ನಿಲುವುಗಳ ವಿರುದ್ಧ ಬಿಜೆಪಿ ಹೋರಾಟ ಮುಂದುವರೆಸಲಿದೆ ಎಂದು ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದೆ.
'ಕಾನೂನುಬಾಹಿರ ನಿರ್ಧಾರ' : ಗೃಹ ಸಚಿವರು ಪೊಲೀಸ್ ಇಲಾಖೆಗೆ ಬರೆದ ಪತ್ರ ಸಂಪೂರ್ಣವಾಗಿ ಕಾನೂನು ಬಾಹಿರ ನಿರ್ಧಾರ ಎಂದು ಶಾಸಕ ಸುನೀಲ್ ಕುಮಾರ್ ದೂರಿದ್ದಾರೆ. ಸರ್ಕಾರ ಮುಸ್ಲಿಂ ಓಲೈಕೆಗಾಗಿ ಸಂವಿಧಾನಬಾಹಿರವಾಗಿ ವರ್ತಿಸಿದರೆ ಪರಿಣಾಮ ಸರಿಯಿರುವುದಿಲ್ಲ. ಕರ್ನಾಟಕದ ಪೊಲೀಸರು ಆಳುವ ಸರ್ಕಾರದ ಆಳುಗಳಂತೆ ವರ್ತಿಸುವುದಕ್ಕೂ ಮುನ್ನ ಅಂದು ನಡೆದ ಬೀಭತ್ಸ್ಯ ಘಟನೆಯನ್ನು ನೆನಪು ಮಾಡಿಕೊಳ್ಳಲಿ. ಉಗ್ರ ಮನಸ್ಥಿತಿಯ ವ್ಯಕ್ತಿಗಳಿಗೆ ಅಮಾಯಕರ ಪಟ್ಟ ಕಟ್ಟಿ ದೇಶವನ್ನು ಸಿರಿಯಾ ಮಾಡುತ್ತೀರಾ? ಎಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟವನ್ನು ಓಲೈಕೆ ರಾಜಕಾರಣದಿಂದ ಕಾಂಗ್ರೆಸ್ ಸರ್ಕಾರ "ಏಕ ಜನಾಂಗದ ಅಶಾಂತಿಯ ಕೂಟ"ವನ್ನಾಗಿ ಮಾಡಲು ಹೊರಟಿದೆ ಎಂದು ಟ್ವೀಟ್ ಮೂಲಕ ಟೀಕಿಸಿದ್ದಾರೆ.
'ಓಲೈಕೆಯ ಹುಚ್ಚು ಕೆಲಸ' : ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿಗಳ ಮೇಲಿನ ಪ್ರಕರಣವನ್ನು ಗೃಹ ಸಚಿವರು ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದ್ದು, ಈ ಮೂಲಕ ಮುಸ್ಲಿಮರನ್ನು ಓಲೈಸಲು ಹುಚ್ಚು ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಶಾಸಕ ತನ್ವೀರ್ ಸೇಠ್ ಅವರ ಮನವಿಯಂತೆ ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಹಾಗೂ ಇತರೆ ಕರ್ನಾಟಕದೆಲ್ಲೆಡೆ ನಡೆದ ಗಲಭೆಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಮೇಲಿನ ಕೇಸುಗಳನ್ನು ವಾಪಸ್ ಪಡೆಯಲು ಕ್ರಮ ಕೈಗೊಳ್ಳಲು ಗೃಹ ಮಂತ್ರಿಗಳು ತಿಳಿಸಿದ್ದಾರೆ. ಈ ಆರೋಪಿಗಳು ಪೊಲೀಸರ ವಿರುದ್ಧ ಕಲ್ಲು ತೂರಿರುವವರು, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರು ಹಾಗು ಗಲಭೆ ನಡೆಸಿದವರೂ ಇದ್ದಾರೆ. ಈ ಹಿಂದೆ ಇವರದ್ದೇ ಸರ್ಕಾರ ಪಿಎಫ್ಐ ಗೂಂಡಾಗಳ ವಿರುದ್ಧ ಕೇಸುಗಳನ್ನು ವಾಪಸ್ ಪಡೆದು ರಾಜ್ಯದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡಲು ಪ್ರಚೋದನೆ ನೀಡಿತ್ತು. ಯಾರದ್ದೋ ಕೃಪೆಯಿಂದ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದಿರುವ ಗೃಹ ಮಂತ್ರಿಗಳು ಈಗ ಮುಸ್ಲಿಮರನ್ನು ಓಲೈಸಲು ಹುಚ್ಚು ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಸರ್ಕಾರದ ನಡೆಯನ್ನು ಅವರು ಖಂಡಿಸಿದ್ದಾರೆ.