ಬೆಂಗಳೂರು: ನಗರದಲ್ಲಿ ನಡೆದ ಶಕೀರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜೈಲುವಾಸ ಅನುಭವಿಸುತ್ತಿರುವ ಸ್ವಾಮಿ ಶ್ರದ್ಧಾನಂದ ಕ್ಷಮಾದಾನ ಕೋರಿ ರಾಷ್ಟ್ರಪತಿಯವರಿಗೆ ಅರ್ಜಿ ಸಲ್ಲಿಸಿದ್ದಾರೆ.
ಆಸ್ತಿ ಆಸೆಗಾಗಿ ಪತ್ನಿಯನ್ನು ಕೊಲೆಗೈದು ಕಳೆದ 27 ವರ್ಷಗಳಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರದಲ್ಲಿರುವ ಜೈಲು ಸೇರಿರುವ 83 ವರ್ಷದ ಸ್ವಾಮಿ ಶ್ರದ್ಧಾನಂದ ಅಲಿಯಾಸ್ ಮುರುಳಿ ಮನೋಹರ್ ಮಿಶ್ರಾ ಸನ್ನಡತೆ ಆಧಾರದ ಮೇಲೆ ಕ್ಷಮಾದಾನ ಕೋರಿ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಪ್ರಕರಣದ ಹಿನ್ನೆಲೆ
1986ರಲ್ಲಿ ಮೈಸೂರಿನ ಮಾಜಿ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಅವರ ಮೊಮ್ಮಗಳಾದ ಶಕೀರಾ ಕಲಲಿ ಜೊತೆ ಶ್ರದ್ಧಾನಂದ ವಿವಾಹವಾಗಿದ್ದರು. 1991 ರಲ್ಲಿ ಶಕೀರಾ ನಿಗೂಢವಾಗಿ ಕಣ್ಮರೆಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ಪೊಲೀಸರಿಗೆ 1994 ರಲ್ಲಿ ಶಕೀರಾ ಹತ್ಯೆಯಾಗಿರುವುದು ಬೆಳಕಿಗೆ ಬಂದಿತ್ತು. ಅಲ್ಲದೆ ಪತಿಯೇ ಪತ್ನಿಯನ್ನು ಹತ್ಯೆಗೈದು ಮನೆಯ ಗೋಡೆಯ ಹಿಂಭಾಗ ಹೂತಿಟ್ಟಿದ್ದಾಗಿ ತಿಳಿದಿತ್ತು.
ಆಸ್ತಿ ಆಸೆಗಾಗಿ ಪತ್ನಿ ಕೊಲೆ
ನಗರದ ರಿಚ್ಮಂಡ್ ರಸ್ತೆಯಲ್ಲಿ ಶಕೀರಾ ಕಲಲಿಗೆ ಸೇರಿದ 600 ಕೋಟಿ ರೂ. ಮೌಲ್ಯದ ಆಸ್ತಿ ಇತ್ತು. ಈ ಆಸ್ತಿಯ ಮೇಲೆ ಕಣ್ಣಿಟ್ಟಿದ್ದ ಶ್ರದ್ಧಾನಂದ ಪತ್ನಿಯನ್ನು ಕೊಲೆಗೈದು ನಾಪತ್ತೆ ನಾಟಕವಾಡಿದ್ದ. 2000ರಲ್ಲಿ ಕೋರ್ಟ್ನಲ್ಲಿ ಈ ಬಗ್ಗೆ ವಿಚಾರಣೆ ನಡೆದಿತ್ತು. 2008 ರಲ್ಲಿ ಅಪರಾಧ ಸಾಭೀತಾಗಿ ಆರೋಪಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದ ಶ್ರದ್ಧಾನಂದ ಮನವಿ ಮೇರೆಗೆ 2011ರಲ್ಲಿ ಮಧ್ಯಪ್ರದೇಶದ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.