ಬೆಂಗಳೂರು: ಓಬಿಸಿಯನ್ನು ಮೀಸಲಾತಿಯೊಳಗೆ ಸೇರಿಸಿಯೇ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಯಾವಾಗ ನಡೆಸುತ್ತೀರಾ? ಎನ್ನುವ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವ ಈಶ್ವರಪ್ಪ, ಸೀಮಾ ನಿರ್ಣಯಕ್ಕೆ ಸಮಿತಿ ಮಾಡಿದ್ದೇವೆ. ಈ ಸಮಿತಿಯು ವರದಿ ನೀಡುವವರೆಗೂ ಕಾಯಬೇಕಾಗುತ್ತದೆ. ಕಾಲಮಿತಿಯಲ್ಲಿ ವರದಿ ನೀಡಿ ಎಂದು ಸೂಚಿಸಲು ಸಾಧ್ಯವಿಲ್ಲ. ಆದರೆ ಆದಷ್ಟು ಬೇಗ ವರದಿ ನೀಡಬೇಕೆಂದು ಮನವಿ ಮಾಡಿದ್ದೇವೆ.
ಸುಪ್ರೀಂಕೋರ್ಟ್ ಓಬಿಸಿಗೆ ಮೀಸಲಾತಿ ಕೊಡಲು ಆಗುವುದಿಲ್ಲ ಎಂದು ಹೇಳಿದೆ. ಈ ಬಗ್ಗೆ ನಮ್ಮ ಮುಖ್ಯಮಂತ್ರಿಗಳು ಕಾನೂನು ತಜ್ಞರ ಜೊತೆ ಚರ್ಚೆ ಮಾಡುತ್ತಿದ್ದಾರೆ. ಆದರೂ ಒಂದಂತೂ ಸತ್ಯ. ನಾವು ಓಬಿಸಿಯವರಿಗೆ ಮೀಸಲಾತಿ ನೀಡಿಯೇ ಚುನಾವಣೆ ನಡೆಸುತ್ತೇವೆ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಈ ತೀರ್ಪು ಬಂದ ಬಳಿಕ ಸಿದ್ದರಾಮಯ್ಯನವರು ಕಾಂತರಾಜ ಆಯೋಗದಿಂದ ಸಮೀಕ್ಷೆ ಮಾಡಿ ವರದಿ ನೀಡಿದ್ದಾರೆ. ಅದನ್ನು ಜಾರಿಗೊಳಿಸಿ ಅಥವಾ ಸುಪ್ರೀಂಕೋರ್ಟ್ಗೆ ನೀಡಿ ಎಂದರು.
ಇದಕ್ಕೆ ತಿರುಗೇಟು ನೀಡಿದ ಈಶ್ವರಪ್ಪ, ಸಿದ್ದರಾಮಯ್ಯ ಸಿಎಂ ಆದಾಗ ವರದಿ ಬೇಗ ನೀಡಿ ಎಂದು ನಾವು ಕೇಳಿದ್ದೆವು, ಆದರೆ ಈಗ ಕೊಡುತ್ತೇವೆ, ಆಗ ಕೊಡುತ್ತೇವೆ ಎಂದು ಕೊಡಲೇ ಇಲ್ಲ ತಿಳಿಸಿದರು.
ಈ ವರದಿಯ ಅಂಶವನ್ನು ಸುಪ್ರೀಕೋರ್ಟ್ಗೆ ಕೊಡಬಹುದಾ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಓಬಿಸಿಯನ್ನು ಮೀಸಲಾತಿಯೊಳಗೆ ಸೇರಿಸಿಯೇ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲಿದ್ದೇವೆ ಎಂದು ಈಶ್ವರಪ್ಪ ಪುನರುಚ್ಚರಿಸಿದರು.
ಇದನ್ನೂ ಓದಿ: ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಪ್ರಶ್ನೆಯೇ ಇಲ್ಲ: ಯಡಿಯೂರಪ್ಪ ಅಚಲ