ಬಳ್ಳಾರಿ : ಕೋವಿಡ್ 3ನೇ ಅಲೆಯನ್ನು ಸಮರ್ಪಕವಾಗಿ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಬೆಡ್‍ಗಳ ವ್ಯವಸ್ಥೆ, ಔಷಧಿಯ ವ್ಯವಸ್ಥೆ, ಮನೆ-ಮನೆ ಸಮೀಕ್ಷೆ, ಆರಂಭಿಕ ಹಂತದಲ್ಲೇ ಸೋಂಕು ಪತ್ತೆಹಚ್ಚಿ ಚಿಕಿತ್ಸೆ ನೀಡುವಿಕೆ, ಎಸ್‍ಎಂಎಸ್ ಕಟ್ಟುನಿಟ್ಟಿನ ಪಾಲನೆ, ನಿರ್ಬಂಧಗಳ ಪರಿಣಾಮಕಾರಿ ಜಾರಿ ಮಾಡುವುದು ಸೇರಿ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿ ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ತಿಳಿಸಿದ್ದಾರೆ.
ಬಳ್ಳಾರಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಮಹಾರಾಷ್ಟ್ರ-ಕೇರಳ ರಾಜ್ಯಗಳಲ್ಲಿ ಈಗಾಗಲೇ ಕೋವಿಡ್ ಸೋಂಕು ವ್ಯಾಪಿಸುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳೊಂದಿಗೆ ಈಗಾಗಲೇ ವಿಡಿಯೋ ಸಂವಾದ ನಡೆಸಿ ಅನೇಕ ಸಲಹೆ-ಸೂಚನೆಗಳನ್ನ ನೀಡಿದ್ದಾರೆ ಎಂದರು.
ಸ್ಥಳೀಯ ಸ್ಥಿತಿಗತಿ ಆಧರಿಸಿ ನಿರ್ಧಾರಗಳನ್ನ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸಿಎಂ ಅವರು ಸೂಚನೆ ನೀಡಿದ್ದಾರೆ. ಅದರನ್ವಯ ನಮ್ಮ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕೋವಿಡ್ 2ನೇ ಅಲೆಯಲ್ಲಿ ಜಿಲ್ಲೆಯಲ್ಲಿ 60 ಸಾವಿರ ಪ್ರಕರಣಗಳು ದಾಖಲಾಗಿದ್ದವು. 8 ಸಾವಿರ ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಸೋಂಕಿತರ ಸಂಖ್ಯೆ 3ನೇ ಅಲೆಯಲ್ಲಿ 1 ಲಕ್ಷಕ್ಕೇರುವ ಸಾಧ್ಯತೆ ಇದೆ. ಇಷ್ಟು ಪ್ರಕರಣಗಳಿಗೆ ಅಗತ್ಯ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಈಗಾಗಲೇ 20 ಸಾವಿರ ಕೋವಿಡ್ ಕಿಟ್, 15 ಸಾವಿರ ರೆಮ್ಡಿಸಿವಿರ್ ಲಸಿಕೆ ಸೇರಿ ಅಗತ್ಯ ಔಷಧಿಗಳು ಸಮರ್ಪಕವಾಗಿ ನಮ್ಮಲ್ಲಿವೆ. ಬಳ್ಳಾರಿ ಜಿಲ್ಲಾಸ್ಪತ್ರೆ, ವಿಮ್ಸ್, ಟ್ರಾಮಾಕೇರ್, ಹೊಸಪೇಟೆ ಎಂಸಿಹೆಚ್ ಆಸ್ಪತ್ರೆ, ಹರಪನಳ್ಳಿ, ಹಡಗಲಿ ಸೇರಿದಂತೆ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಅಗತ್ಯವಾದ ಆಕ್ಸಿಜನ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ವಿಶಾಲ ಮೈದಾನಗಳಿಗೆ ತರಕಾರಿ/ಹಣ್ಣು ಮಾರುಕಟ್ಟೆ ಸ್ಥಳಾಂತರ : ಮೊದಲ ಹಾಗೂ 2ನೇ ಅಲೆಯ ಸಂದರ್ಭದಲ್ಲಿ ಇದ್ದಂತೆ ಈ ಬಾರಿಯೂ ಜನಸಂದಣಿ ಹೆಚ್ಚಿರುವ ತರಕಾರಿ-ಹಣ್ಣು ಮಾರುಕಟ್ಟೆಗಳ ಮಾರಾಟಗಾರರನ್ನ ವಿಶಾಲ ಮೈದಾನಗಳಿಗೆ ಸ್ಥಳಾಂತರಿಸಲಾಗುವುದು. ಬಳ್ಳಾರಿ-ಹೊಸಪೇಟೆ ನಗರಗಳ ವಿಶಾಲ ಮೈದಾನದಲ್ಲಿ ಮುಂದಿನ ವಾರ ಈ ತರಕಾರಿ ಮಾರುಕಟ್ಟೆಗಳನ್ನ ಸ್ಥಳಾಂತರ ಮಾಡಲಾಗುವುದು ಎಂದು ವಿವರಿಸಿದ್ದಾರೆ.
ಸೋಂಕಿನ ಪ್ರಕರಣಗಳು ಹೆಚ್ಚು ವರದಿಯಾಗಿರುವ ಬಳ್ಳಾರಿಯ ಹುಸೇನ್ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಆ.2ರಿಂದಲೇ ಮನೆ-ಮನೆ ಸಮೀಕ್ಷೆ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಮುಂದಿನ ವಾರ ಖಾಸಗಿ ಆಸ್ಪತ್ರೆಗಳ ಸಭೆ ನಡೆಸಿ 3ನೇ ಅಲೆ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗುವುದು ಎಂದು ಹೇಳಿದರು.
ಅಗತ್ಯ ಬಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಫೀವರ್ ಕ್ಲಿನಿಕ್‍ಗಳ ಸ್ಥಾಪನೆ : ಜ್ವರ, ಕೆಮ್ಮು, ನೆಗಡಿ ಬಂದರೆ ನಿರ್ಲಕ್ಷ್ಯ ವಹಿಸದೇ ಫೀವರ್ ಕ್ಲಿನಿಕ್‍ಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಲು ಜನರು ಮುಂದಾಗಬೇಕು ಎಂದು ಮನವಿ ಮಾಡಿದರು. ನಿರ್ಲಕ್ಷ್ಯವಹಿಸಿದ್ದಕ್ಕೆ 1 ಮತ್ತು 2ನೇ ಅಲೆಯ ಸಂದರ್ಭದಲ್ಲಿ ಯಾವ ಸ್ಥಿತಿ ಎದುರಿಸಿದೆವು ಎಂಬುದು ನಮಗೆಲ್ಲಾ ಗೊತ್ತಿದೆ ಎಂದು ಎಚ್ಚರಿಸಿದರು.
ಸಾರ್ವಜನಿಕರೊಂದಿಗೆ ನಿತ್ಯ ವ್ಯವಹರಿಸುವಾಗ ವ್ಯಾಪಾರಸ್ಥರು ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಅಂಗಡಿಗಳನ್ನ ಬಂದ್ ಮಾಡಲಾಗುವುದು. ಜಿಲ್ಲೆಯಲ್ಲಿ ಮೊದಲ ಡೋಸ್ ಅನ್ನು 8.50ಲಕ್ಷ ಮಂದಿ ಪಡೆದಿದ್ದಾರೆ. 2.40ಲಕ್ಷ ಜನರು 2ನೇ ಡೋಸ್ ಪಡೆದಿದ್ದಾರೆ ಎಂದು ವಿವರಿಸಿದ ಅವರು, ಜನರು ಮುಂದೆ ಬಂದು ಲಸಿಕೆ ಹಾಕಿಸಿಕೊಳ್ಳಬೇಕು. ಕೊರೊನಾ ಎದುರಿಸಲು ಲಸಿಕೆಯೇ ಮದ್ದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಮಾತನಾಡಿ, ಲಾಕ್‍ಡೌನ್ ಮುಗಿದಿದೆ ಎಂದರೆ ಕೊರೊನಾ ಹೋಗಿದೆ ಎಂಬ ಮನಸ್ಥಿತಿಯಲ್ಲಿ ಜನರು ಎಸ್‍ಎಂಎಸ್ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಎಸ್‍ಎಂಎಸ್ ಕುರಿತು ಜಾಗೃತಿ ಮತ್ತು ಕಡ್ಡಾಯ ಪಾಲನೆ ಕುರಿತು ಪೊಲೀಸ್, ಕಂದಾಯ, ನಗರ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಜಾಗೃತಿ ಕಾರ್ಯಾಚರಣೆಗಳನ್ನ ನಾಳೆಯಿಂದ ನಡೆಸಲಾಗುವುದು ಎಂದರು.
ಮುಂದಿನ ವಾರ ಸ್ಥಿತಿಗತಿ ನೋಡಿಕೊಂಡು ಅಂತರ್ ರಾಜ್ಯ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲು ಕ್ರಮವಹಿಸಲಾಗುವುದು. 2ನೇ ಅಲೆಯ ಸಂದರ್ಭದಲ್ಲಿ 18 ಸಾವಿರ ವಾಹನಗಳನ್ನ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿತ್ತು ಎಂದು ತಿಳಿಸಿದರು.
ಓದಿ: ಬಿಎಸ್ವೈ ದೂರ ಇಟ್ಟು ಏನೂ ಮಾಡಲು ಸಾಧ್ಯವಿಲ್ಲ, ಸರ್ಕಾರಕ್ಕೆ ಸಂಕಷ್ಟ ಬಂದ್ರೆ ನನ್ನ ಸಪೋರ್ಟ್ ಇದೆ : ಹೆಚ್ಡಿಡಿ