ಬೆಂಗಳೂರು: ಮಹಾನಗರದಿಂದ ತಮ್ಮ ಊರುಗಳಿಗೆ ಶ್ರಮಿಕ್ ರೈಲಿನಲ್ಲಿ ತೆರಳುತ್ತಿರುವ ವಲಸೆ ಕಾರ್ಮಿಕ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ವಿತರಿಸುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್ ತಿಳಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಂಜೆ 3 ಗಂಟೆಗೆ ನಗರದ ಚಿಕ್ಕಬಾಣಾವರ ರೈಲು ನಿಲ್ದಾಣದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸುಷ್ಮಿತಾ ದೇವ್ ಈ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಕನಸಿನ ಯೋಜನೆ ಇದಾಗಿದ್ದು, ದೇಶಾದ್ಯಂತ ಏಕಕಾಲಕ್ಕೆ ಚಾಲನೆ ಪಡೆಯುತ್ತಿದೆ ಎಂದರು.
ವಲಸೆ ಕಾರ್ಮಿಕ ಮಹಿಳೆಯರಿಗೆ ಈ ಕಿಟ್ ವಿತರಿಸಲಾಗುತ್ತಿದ್ದು ಇದು ಸ್ಯಾನಿಟರಿ ಪ್ಯಾಡ್, ಸಾಬೂನು ಹಾಗೂ ಡಿಸ್ಫೋಸೆಬಲ್ ಬ್ಯಾಗ್ ಒಳಗೊಂಡಿದೆ. ವಿಶ್ವ ಮುಟ್ಟಿನ ನೈರ್ಮಲ್ಯ ದಿನಾಚರಣೆ ನಡೆಯುತ್ತಿದ್ದು, ಈ ಸಂದರ್ಭ ಪಕ್ಷದ ವತಿಯಿಂದ ಗರಿಮೆ ಅಂದರೆ ಕನ್ನಡದಲ್ಲಿ ಘನತೆ ಎಂಬ ಹೆಸರಿನಲ್ಲಿ ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.
ಕೋವಿಡ್-19 ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ ನಿರ್ಧಾರದ ಪರಿಣಾಮ ದೇಶದ ವಿವಿಧ ರಾಜ್ಯಗಳಿಗೆ ವಲಸೆ ಹೋಗಿ ದುಡಿಯುತ್ತಿದ್ದ ಲಕ್ಷಾಂತರ ಕಾರ್ಮಿಕರು ಬಿಕ್ಕಟ್ಟಿಗೆ ಸಿಲುಕಿದ್ದಾರೆ. ಇವರಿಗೆ ಅಗತ್ಯ ಜೀವನಾವಶ್ಯಕ ವಸ್ತುಗಳನ್ನು ಕಾಂಗ್ರೆಸ್ ಪಕ್ಷ ನೀಡಿ ನೆರವಾಗುತ್ತಿದೆ. ಮಹಿಳಾ ಕಾಂಗ್ರೆಸ್ ಈಗಾಗಲೇ ಒಂದು ಲಕ್ಷ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ಗಳನ್ನು ನೀಡುವ ಕಾರ್ಯ ಮಾಡಿದ್ದು, ಇದೀಗ ಎರಡನೇ ಹಂತವಾಗಿ ವಲಸೆ ಕಾರ್ಮಿಕರಿಗೆ ಕನಿಷ್ಠ 3 ಲಕ್ಷ ಕಿಟ್ಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದರು.