ಬೆಂಗಳೂರು: ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಂಡಿರುವ ‘ಶಿಕ್ಷಣಕ್ಕೆ ಸಹಾಯ’ದ (Help Educate) ಉಪಕ್ರಮದ ಅಂಗವಾಗಿ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ 12,500 ಡಿ-ಬಾಂಡೆಡ್ ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳನ್ನು ನೀಡುವ ಬಗ್ಗೆ ಮಹತ್ವದ ಒಪ್ಪಂದ ಮಾಡಿಕೊಳ್ಳಲಾಗಿದೆ.
ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಪರಿಕಲ್ಪನೆಯಂತೆ ಈ ಒಪ್ಪಂದ ಆಗಿದ್ದು, ನಗರ-ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ನಡುವೆ ಡಿಜಿಟಲ್ ಅಂತರವನ್ನು ಆಳಿಸಿಹಾಕಲು ಈ ಉಪಕ್ರಮ ಪೂರಕವಾಗಲಿದೆ.
ಈ ಕುರಿತು ತಿಳುವಳಿಕೆ ಪತ್ರಕ್ಕೆ ಇಂದು ಉಪ ಮುಖ್ಯಮಂತ್ರಿಗಳ ಸಮಕ್ಷಮದಲ್ಲಿ ಸಹಿ ಹಾಕಲಾಗಿದ್ದು, ಇದರಲ್ಲಿ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ (ಡಿಸಿಟಿಇ), ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ರೋಟರಿ ಕ್ಲಬ್ ವೈಟ್‌ಫೀಲ್ಡ್ ಸೆಂಟ್ರಲ್ ವತಿಯಿಂದ ಸಹಿ ಹಾಕಲಾಗಿದೆ.
ಈ ವೇಳೆ ಮಾತನಾಡಿದ ಡಿಸಿಎಂ ಡಾ. ಅಶ್ವತ್ಥ ನಾರಾಯಣ, ಈ ಕಾರ್ಯಕ್ರಮದಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ಮತ್ತು ವಿದ್ಯಾರ್ಥಿಗಳ ಕಲಿಕೆಯಲ್ಲಿ ವ್ಯತ್ಯಾಸವನ್ನುಂಟು ಮಾಡುವ ಪ್ರಮುಖ ಉದ್ದೇಶವನ್ನು ಹೊಂದಿದೆ. ಅವರಲ್ಲಿ ಹೆಚ್ಚಿನವರು ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ
‘ಶಿಕ್ಷಣಕ್ಕೆ ಸಹಾಯ’ ಮಾಡುವ ಈ ಕಾರ್ಯಕ್ರಮದ ಅಡಿಯಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಕಾರ್ಪೋರೇಟ್ ಕಂಪನಿಗಳು ಮತ್ತು ದಾನಿಗಳ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಕಲಿಕೆ ಬಗ್ಗೆ ತರಬೇತಿ ನೀಡಲಾಗುವುದು. ಬೋಧಕ ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮಗಳು, ಡಿಜಿಟಲ್ ಬೋಧನೆಯ ಮೂಲಕ ಆಧುನಿಕ ವಿಧಾನದಲ್ಲಿ ಪ್ರಾಧ್ಯಾಪಕರು ಅಪ್‌ಗ್ರೇಡ್ ಆಗಲು ಇದರಿಂದ ಸಾಧ್ಯವಿದೆ. ಜತೆಗೆ ಡಿಜಿಟಲ್ ಕಲಿಕೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸರ್ಕಾರಿ ಕಾಲೇಜುಗಳನ್ನು ಸಜ್ಜುಗೊಳಿಸುವ ಅಂಶವೂ ಇದರಲ್ಲಿ ಸೇರಿದೆ ಎಂದರು.
ಕಂಪ್ಯೂಟರ್‌ಗಳ ಅಗತ್ಯ: ಸರ್ಕಾರಿ ಕಾಲೇಜುಗಳಿಗೆ ಸುಮಾರು 30,000 ಕಂಪ್ಯೂಟರ್‌ಗಳು ಅಗತ್ಯ ಇದ್ದು, ಆ ಪೈಕಿ ಈಗ 12,500 ಕಂಪ್ಯೂಟರ್‌ಗಳನ್ನು ಒದಗಿಸಲಾಗಿದೆ. ಸುಮಾರು 50 ಕೋಟಿ ರೂ.ಗಳ ಯೋಜನೆ ಇದಾಗಿದ್ದು, ವಿದ್ಯಾರ್ಥಿಗಳನ್ನು ಆಧುನಿಕ ಕಲಿಕೆಯತ್ತ ಕರೆದೊಯ್ಯಲು, ಡಿಜಿಟಲ್ ತಾರತಮ್ಯವನ್ನು ನಿವಾರಿಸುವ ಈ ಉದಾತ್ತ ಉದ್ದೇಶಕ್ಕೆ ಖಾಸಗಿ ಸಂಘ ಸಂಸ್ಥೆಗಳು ಸರ್ಕಾರದ ಜತೆ ಕೈಜೋಡಿಸುತ್ತಿರುವುದು ಸಂತೋಷ ಉಂಟು ಮಾಡಿದೆ. ಇನ್ನೂ ಅನೇಕ ದಾನಿಗಳು ಶಿಕ್ಷಣಕ್ಕೆ ಸಹಾಯ ಮಾಡಲು ಮುಂದೆ ಬಂದಿದ್ದಾರೆ ಎಂದರು.
ಈ ಉದಾತ್ತ ಕಾರ್ಯಕ್ರಮದ ಅಡಿಯಲ್ಲಿ ಕಾಗ್ನಿಜೆಂಟ್ ಇಂಡಿಯಾ ಪ್ರೈ. ಲಿಮಿಟೆಡ್ ಇಲಾಖೆಗೆ 12,500 ಡಿ-ಬಾಂಡೆಡ್, ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳನ್ನು ಒದಗಿಸಲು ಸ್ವಯಂ ಪ್ರೇರಿತವಾಗಿ ಮುಂದೆ ಬಂದಿದೆ. ಇದರೊಂದಿಗೆ ವಿದ್ಯಾರ್ಥಿಗಳ ಬಳಕೆಗಾಗಿ ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಂಪ್ಯೂಟರ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗುವುದು. ರೋಟರಿ ಕ್ಲಬ್‌ನವರು ವಿಂಡೋಸ್ ಒಎಸ್ ಒದಗಿಸಲಿದ್ದಾರೆ. ನಂತರ ಕಂಪ್ಯೂಟರ್‌ಗಳನ್ನು ನಿಗದಿತ ಕಾಲೇಜುಗಳಿಗೆ ತಲುಪಿಸುವ ಕೆಲಸ ಮಾಡಲಿದ್ದಾರೆ ಎಂದು ಡಿಸಿಎಂ ಮಾಹಿತಿ ನೀಡಿದರು.
ಇದನ್ನೂ ಓದಿ: ಸುಸಜ್ಜಿತ ರಸ್ತೆ - ಸುರಕ್ಷಿತ ಪಾದಚಾರಿ ಮಾರ್ಗ: ಅಪಘಾತಕ್ಕೆ ಕಡಿವಾಣ ಹಾಕೋಣ!