ಬೆಂಗಳೂರು: ವಿದ್ಯಾ ವಿಕಾಸ ಯೋಜನೆಯಡಿ ರಾಜ್ಯದ ನೆರೆ ಪೀಡಿತ ಸಂತ್ರಸ್ತ ಪ್ರದೇಶಗಳ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಹೆಚ್ಚುವರಿ ಸಮವಸ್ತ್ರ ವಿತರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ, ವಿಶೇಷಾಧಿಕಾರಿ ಎಸ್ ಆರ್ ಎಸ್ ನಾಧನ್ ಸೂಚಿಸಿದ್ದಾರೆ.
ರಾಜ್ಯದ ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ, ಗದಗ, ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ರಾಯಚೂರು ಮುಂತಾದ ಜಿಲ್ಲೆಗಳಲ್ಲಿ ಇತ್ತೀಚೆಗೆ ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದಾಗಿ ಅನೇಕ ಶಾಲೆಗಳು, ಮನೆಗಳು ಮುಳುಗಡೆ ಮತ್ತು ಹಾನಿಗೊಳಗಾಗಿವೆ.
ಈ ಸಮಯದಲ್ಲಿ ಮಕ್ಕಳ ಶಾಲಾ ಸಮವಸ್ತ್ರಗಳು ಹಾಳಾಗಿದ್ದು, ನೆರೆ ಸಂತ್ರಸ್ತ ಜಿಲ್ಲೆಗಳ ಸರ್ಕಾರಿ ಶಾಲಾ ಮಕ್ಕಳಿಗೆ ಹೆಚ್ಚುವರಿಯಾಗಿ 87,903 ಜೊತೆ ಸಮವಸ್ತ್ರವನ್ನು ಪೂರೈಸಲು ಅನುಮತಿ ನೀಡುವಂತೆ ಕೋರಲಾಗಿದೆ. ಹೀಗಾಗಿ ಈ ಪ್ರಸ್ತಾವನೆಯ ಅಂಶಗಳನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಇನ್ನು ಈ ಉದ್ದೇಶಕ್ಕಾಗಿ ತಗಲುವ ವೆಚ್ಚವನ್ನು 2019-20 ನೇ ಸಾಲಿನ ಆಯವ್ಯಯ ವಿದ್ಯಾವಿಕಾಸ ಯೋಜನೆಯಡಿ ಉಳಿಕೆಯಾಗಬಹುದಾದ ಅನುದಾನದಿಂದ ಭರಿಸುವಂತೆ ಸೂಚಿಸಲಾಗಿದೆ.