ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆಯಿಂದ ಪತನದ ಭೀತಿಯಲ್ಲಿರುವ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಸೈಲೆಂಟ್ ಆಗಿದ್ದಾರೆ. ಸರ್ಕಾರದಲ್ಲಿ ಅಧಿಕಾರ ಅನುಭವಿಸುತ್ತಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಹಿರಿಯ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಇತರ ಕಾಂಗ್ರೆಸ್ ನಾಯಕರು ಸರ್ಕಾರ ಉಳಿಸಿಕೊಳ್ಳಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಜತೆ ನಡೆಸಿದ ಮಾತುಕತೆಯಲ್ಲಿ ಸಿದ್ದರಾಮಯ್ಯನವರು ಅತೃಪ್ತರ ರಾಜೀನಾಮೆಯಿಂದ ಮೈತ್ರಿ ಸರ್ಕಾರ ಉಳಿಯುವುದು ಕಷ್ಟ. ಅಧಿಕಾರ ಕಳೆದುಕೊಂಡು ಪ್ರತಿಪಕ್ಷದಲ್ಲಿ ಕೂರೋದು ಉತ್ತಮವೆಂದು ಅಭಿಪ್ರಾಯ ಪಟ್ಟಿದ್ದಾರೆಂದು ಹೇಳಲಾಗಿದೆ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಕಾಂಗ್ರೆಸ್ ಶಾಸಕರನ್ನು ವಿಶ್ವಾಸಕ್ಕೆ ತಗೆದುಕೊಂಡು ಆಡಳಿತ ನಡೆಸುತ್ತಿಲ್ಲ. ಇದರ ಪರಿಣಾಮವಾಗಿ ಶಾಸಕರು ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗಿದೆ ಎಂದು ಹೈಕಮಾಂಡ್ ಬಳಿ ಸ್ಥಿತಿಗತಿಯನ್ನು ಸಿದ್ದರಾಮಯ್ಯ ವಿವರಿಸಿದ್ದಾರೆ.
ಈ ಪರಿಸ್ಥಿತಿಯಲ್ಲಿ ತಮ್ಮಿಂದ ಅತೃಪ್ತರ ಮನವೊಲಿಕೆ ಕಷ್ಟವೆಂದು ಸಿದ್ದರಾಮಯ್ಯ ಕೈ ಚೆಲ್ಲಿ ಕುಳಿತಿದ್ದಾರೆನ್ನಲಾಗಿದೆ. ದೋಸ್ತಿ ಸರ್ಕಾರ ಉಳಿಸಿಕೊಳ್ಳಲು ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ ಮತ್ತು ಹಿರಿಯ ಸಚಿವ ಡಿ.ಕೆ. ಶಿವಕುಮಾರ್ ತಮ್ಮ ತಮ್ಮ ನೆಟ್ ವರ್ಕ್ನಲ್ಲಿ ಭಾರೀ ಕಸರತ್ತು ನಡೆಸಿದ್ದಾರೆ. ಡಿಸಿಎಂ ಪರಮೇಶ್ವರ್ ಅವರು ಕಾಂಗ್ರೆಸ್ ಹೈಕಮಾಂಡ್ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಜತೆ ಸತತ ಸಂಪರ್ಕದಲ್ಲಿದ್ದು, ಮಾತುಕತೆ ಹಾಗೂ ತಂತ್ರಗಾರಿಕೆ ಹೆಣೆಯುವ ಮೂಲಕ ಸರ್ಕಾರ ಉಳಿಸಿಕೊಳ್ಳಲು ಶತ ಪ್ರಯತ್ನ ನಡೆಸಿದ್ದಾರೆ.
ಹಿರಿಯ ಮುಖಂಡರಾದ ಡಿ.ಕೆ. ಶಿವಕುಮಾರ್ ಸಹ ಅತೃಪ್ತರನ್ನು ಭೇಟಿಯಾಗಿ ಖಾಸಗಿಯಾಗಿ ಮಾತನಾಡಿ ಸರ್ಕಾರವನ್ನು ಅಪಾಯದಿಂದ ಪಾರು ಮಾಡಲು ಯತ್ನಿಸುತ್ತಿದ್ದಾರೆ. ರಾಜೀನಾಮೆ ನೀಡಿರುವ ಶಾಸಕರಾದ ರಾಮಲಿಂಗಾ ರೆಡ್ಡಿ, ಮುನಿರತ್ನ ಸೇರಿದಂತೆ ಇತರ ಅತೃಪ್ತ ಶಾಸಕರ ಮನವೊಲಿಸಿ ರಾಜೀನಾಮೆ ವಾಪಾಸ್ ಪಡೆಯುವಂತೆ ಒತ್ತಡ ಹಾಕತೊಡಗಿದ್ದಾರೆ. ಮುನಿರತ್ನ ಮೂಲಕ ಬಾಂಬೆಯ ಖಾಸಗಿ ಹೋಟೆಲ್ನಲ್ಲಿ ತಂಗಿರುವ ಅತೃಪ್ತ ಶಾಸಕರನ್ನು ಬೆಂಗಳೂರಿಗೆ ವಾಪಾಸ್ ಕರೆಸಲು ಪ್ರಯತ್ನ ನಡೆಸಲಾಗ್ತಿದೆ.
ಜೆಡಿಎಸ್ ಜತೆಗಿನ ಮೈತ್ರಿ ಕಡಿದುಕೊಂಡು ಪ್ರತಿಪಕ್ಷ ಸ್ಥಾನದಲ್ಲಿ ಕುಳಿತರೆ ಬರುವ ವಿಧಾನಸಭೆ ಚುನಾವಣೆಯಲ್ಲಿಯಾದರೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿದೆ. ಜೆಡಿಎಸ್ ಜೊತೆಗೆ ಹೋದರೆ ಕಾಂಗ್ರೆಸ್ ಅಸ್ಥಿತ್ವಕ್ಕೆ ಧಕ್ಕೆ ಬರಲಿದೆ. ಲೋಕಸಭೆ ಚುನಾವಣೆಯಲ್ಲಿ ಅದು ಸಾಬೀತಾಗಿದೆ ಎಂದು ಸಿದ್ದರಾಮಯ್ಯ ತಮ್ಮದೇ ಆದ ವಾದ ಹೈಕಮಾಂಡ್ ಮುಂದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.