ಬೆಂಗಳೂರು: ತಮಿಳುನಾಡಿನ ಹೊಸೂರಿನಿಂದ ಬೆಂಗಳೂರಿಗೆ ಕೆಲಸಕ್ಕೆ ಬರುವ ಜನರಿಗೆ ಗಡಿಯಲ್ಲಿ ಅಡ್ಡಿ ಉಂಟುಮಾಡುತ್ತಿದ್ದಾರೆ ಎಂದು ಆರೋಪಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ.
ಹೊರ ರಾಜ್ಯಗಳ ಜನ ರಾಜ್ಯ ಪ್ರವೇಶಿಸುವ ಮುನ್ನ ಸೇವಾ ಸಿಂಧು ವೆಬ್ ಪೋರ್ಟಲ್ ನಲ್ಲಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂಬ ಎಸ್ಒಪಿಯನ್ನು ಸರ್ಕಾರ ಇತ್ತೀಚೆಗೆ ಪರಿಷ್ಕರಿಸಿ, ನಿಯಮಗಳನ್ನೂ ಸಡಿಲಿಸಿತ್ತು. ಇದರಿಂದ ಗಡಿ ಭಾಗದ ಜನರ ಓಡಾಟಕ್ಕಿದ್ದ ಸಮಸ್ಯೆ ಬಗೆಹರಿಸದಿದ್ದನ್ನು ಪರಿಗಣಿಸಿದ ಹೈಕೋರ್ಟ್ ಅರ್ಜಿ ಇತ್ಯರ್ಥಪಡಿಸಿ ಆದೇಶಿಸಿತು.
ಅರ್ಜಿದಾರರು, ಹೊಸೂರು ಸೇರಿದಂತೆ ತಮಿಳುನಾಡಿನ ಗಡಿ ಭಾಗದ ಜನ ಬೆಂಗಳೂರಿಗೆ ಕೆಲಸಕ್ಕೆ ಬರುವುದಕ್ಕೆ ಪೊಲೀಸರು ಅಡ್ಡಿ ಮಾಡುತ್ತಿದ್ದಾರೆ. ಕರ್ನಾಟಕ ಸರ್ಕಾರ ನೆರೆ ರಾಜ್ಯಗಳ ಜನ ರಾಜ್ಯ ಪ್ರವೇಶಿಸುವ ಮುನ್ನ ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಉದ್ಯೋಗದಾತ ಸಂಸ್ಥೆಯಿಂದ ಪತ್ರ ತರಬೇಕು ಎಂಬ ನಿಯಮಗಳನ್ನು ಎಸ್ಒಪಿ ಯಲ್ಲಿ ಸೇರಿಸಿರುವುದು ಗಡಿ ಭಾಗದ ಜನರ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಆರೋಪಿಸಿ ಪಿಐಎಲ್ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಪೀಠ, ಕೇಂದ್ರ ಸರ್ಕಾರ ಅನ್ ಲಾಕ್ 3 ರ ಆದೇಶದಲ್ಲಿ ಅಂತಾರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿದೆ. ಹಾಗಿದ್ದೂ ರಾಜ್ಯ ಸರ್ಕಾರ ಈ ನಿಯಮ ಕಡ್ಡಾಯಗೊಳಿಸಿರುವುದೇಕೆ ಎಂದು ಪ್ರಶ್ನಿಸಿತ್ತಲ್ಲದೇ, ಈ ಕುರಿತು ಸ್ಪಷ್ಟನೆ ನೀಡುವಂತೆ ನಿರ್ದೇಶಿಸಿತ್ತು. ಆ ಬಳಿಕ ರಾಜ್ಯ ಸರ್ಕಾರ ತನ್ನ ಎಸ್ಒಪಿ ಪರಿಷ್ಕರಿಸಿತ್ತು.