ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ನಡೆಸುವ ಪಾಲಿಕೆ ಸದಸ್ಯರನ್ನು, ಶಾಸಕರ ರೀತಿಯಲ್ಲೇ ಅನರ್ಹಗೊಳಿಬೇಕು ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಒತ್ತಾಯಿಸಿದ್ದಾರೆ.
ನಗರದ ಐದು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್, ಜೆಡಿಎಸ್ ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡ ನಂತರ, ಅದರ ಬೆನ್ನಲ್ಲೇ ಬೆಂಬಲಿಗರು, ಪಾಲಿಕೆ ಸದಸ್ಯರು ಬಿಜೆಪಿ ಪರ ಬಹಿರಂಗ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಚುನಾವಣೆ ನಡೆದ ನಾಲ್ಕು ಕ್ಷೇತ್ರಗಳಲ್ಲಿ, ಕೆ.ಆರ್.ಪುರಂನಲ್ಲಿ ನಾಲ್ವರು ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು, ಯಶವಂತಪುರದಲ್ಲಿ ಇಬ್ಬರು ಶಿವಾಜಿ ನಗರದಲ್ಲಿ ಇಬ್ಬರು ಹಾಗೂ ಮಹಾಲಕ್ಷ್ಮಿ ಲೇಔಟ್ನಲ್ಲಿ ಇಬ್ಬರು, ಜೆಡಿಎಸ್ ಸದಸ್ಯರು, ಬಿಜೆಪಿ ಶಾಸಕರಿಗೆ ಪ್ರಚಾರ ನಡೆಸಿದ್ದಾರೆ. ಈಗಾಗಲೆ ಕಾಂಗ್ರೆಸ್ ಸದಸ್ಯರನ್ನು 6 ವರ್ಷ ಉಚ್ಛಾಟನೆ ಮಾಡಿದೆ. ಆದರೆ, ಶಾಸಕರ ನಿಯಮದಂತೆ ಪಕ್ಷಾಂತರ ಮಾಡಿದ ಪಾಲಿಕೆ ಸದಸ್ಯರನ್ನು ಅನರ್ಹ ಮಾಡಬೇಕೆಂದು ಎಂದು ಮನವಿ ಬರೆದಿದ್ದೇನೆ ಎಂದು ಹೇಳಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳಿಗೆ ಪಟ್ಟು: ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ಡಿಸೆಂಬರ್ ಅಂತ್ಯದೊಳಗೆ ನಡೆಯಲಿದೆ. ಆ ವೇಳೆ ಬಿಜೆಪಿಗೆ ಬೆಂಬಲ ನೀಡಿದ ಪಾಲಿಕೆ ಸದಸ್ಯರಿಗೆ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕೊಡಿಸುವಂತೆ ಗೆದ್ದ ಶಾಸಕರಲ್ಲಿ ಒತ್ತಡ ಹೇರಿದ್ದಾರೆ ಎನ್ನಲಾಗುತ್ತಿದೆ.
ಈ ಬಗ್ಗೆ ದೂರವಾಣಿ ಮೂಲಕ ಮಾತನಾಡಿದ, ಶಿವಾಜಿನಗರ ಕಾಂಗ್ರೆಸ್ ಪಾಲಿಕೆ ಸದಸ್ಯ ಗುಣಶೇಖರ್, ಈಗಾಗಲೇ ಕಾಂಗ್ರೆಸ್ ನಿಂದಲೂ ಉಚ್ಛಾಟಿಸಿದ್ದಾರೆ. ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನದ ಅಧಿಕಾರವಾದರೂ ಬೇಕು ಎಂಬುದು ನಮ್ಮ ಬೇಡಿಕೆ ಎಂದರು.
ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡಿಯಾಗಿದೆ. ಅಧ್ಯಕ್ಷರಾದ್ರು ಆಗಲಿ, ಸದಸ್ಯರಾದ್ರು ಆಗಲಿ. ಆದರೆ, ಅವರ ಪಕ್ಷದ ಸದಸ್ಯರೇ ನಾಲ್ಕು ವರ್ಷದಿಂದ ಕಾಯುತ್ತಿರುವಾಗ, ಮತ್ತೆ ಬಿಜೆಪಿಯ ಒಳಗೊಳಗೇ ಭಿನ್ನಮತ ಆಗಬಹುದು. ಪ್ರಾದೇಶಿಕ ಚುನಾವಣಾ ಆಯುಕ್ತರಿಗೆ ಪತ್ರ ಬರೆಯುತ್ತೇನೆ. ನಾಲ್ಕು ವರ್ಷ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಅನುಭವಿಸಿ, ಈಗ ಪಕ್ಷಾಂತರ ಮಾಡಿದ್ದಾರೆ. ಸರ್ಕಾರಕ್ಕೂ ಪತ್ರ ಬರೆಯಲಾಗುವುದು. ಕೆ.ಎಂ.ಸಿ ಆಕ್ಟ್ ನಲ್ಲಿ ಬದಲಾವಣೆ ಆಗಬೇಕು ಎಂದು ವಾಜಿದ್ ಆಗ್ರಹಿಸಿದ್ದಾರೆ.