ಬೆಂಗಳೂರು : ಬಿಜೆಪಿ ಸರಕಾರದಲ್ಲಿನ ಸಚಿವ ಸಂಪುಟ ವಿಸ್ತರಣೆ ಗೊಂದಲ, ಖಾತೆ ಹಂಚಿಕೆ ಬೇಸರ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಬಿಜೆಪಿಯ ನಡವಳಿಕೆ ಬಗ್ಗೆ ಅನರ್ಹ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಸಚಿವ ಸಂಪುಟ ವಿಸ್ತರಣೆ ಮಾಡುತ್ತಿದ್ದಂತೆ ಅನರ್ಹ ಶಾಸಕರು ದೆಹಲಿಗೆ ತೆರಳಿ ಬೀಡು ಬಿಟ್ಟಿದ್ದಾರೆ. ಮೈತ್ರಿ ಸರ್ಕಾರ ಪತನದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ತಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ ಎನ್ನುವ ಭಾವನೆ ಅನರ್ಹ ಎಂಎಲ್ಎಗಳಲ್ಲಿ ಮೂಡಿದೆ.
ದೆಹಲಿಯಲ್ಲಿ ಗುರುವಾರ ಸಭೆ ಸೇರಿ ಚರ್ಚಿಸಿದ ಅನರ್ಹ ಶಾಸಕರಾದ ಹೆಚ್ ವಿಶ್ವನಾಥ್, ಎಸ್ ಟಿ ಸೋಮಶೇಖರ್, ರಮೇಶ್ ಜಾರಕಿಹೊಳಿ, ಗೋಪಾಲಯ್ಯ, ಭೈರತಿ ಬಸವರಾಜ್, ಮಹೇಶ್ ಕುಮಟಳ್ಳಿ ಹಾಗು ಇತರರು ತಮ್ಮ ವಿಶ್ವಾಸಕ್ಕೆ ತಗೆದುಕೊಳ್ಳದೇ ಸರಕಾರದಲ್ಲಿ ಕೆಲವು ಪ್ರಮುಖ ನಿರ್ಧಾರ ತಗೆದುಕೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.
ಕಾಂಗ್ರೆಸ್ - ಜೆಡಿಎಸ್ ತೊರೆದು, ಶಾಸಕ ಸ್ಥಾನವನ್ನೂ ಕಳೆದುಕೊಂಡು ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಅವಕಾಶ ಮಾಡಿಕೊಟ್ಟ ತಮ್ಮೊಂದಿಗೆ ಯಾವುದೇ ಪ್ರಮುಖ ಸಂಗತಿ ಚರ್ಚೆ ಮಾಡದಿರುವ ಕುರಿತೂ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ.
ಸುಪ್ರೀಂಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ವಿಳಂಬವಾಗುತ್ತಿರುವ ಬಗ್ಗೆಯೂ ಅನರ್ಹ ಶಾಸಕರು ಬೇಸರ ಪಟ್ಟುಕೊಂಡಿದ್ದಾರೆ. ಈ ಬಗ್ಗೆ ಹಿರಿಯ ವಕೀಲರ ಜತೆ ಸಮಾಲೋಚನೆ ನಡೆಸಿ ನ್ಯಾಯಾಲಯದಲ್ಲಿ ತ್ವರಿತ ವಿಚಾರಣೆಗೆ ಬಿಜೆಪಿ ಆಸಕ್ತಿ ತೋರದಿರುವ ಬಗ್ಗೆಯೂ ಬೇಸರ ಹಂಚಿಕೊಂಡಿದ್ದಾರೆನ್ನಲಾಗಿದೆ.