ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪು ಹೊರಬಿದ್ದ ಬೆನ್ನಲ್ಲೇ 16 ಅನರ್ಹ ಶಾಸಕರು ತಮ್ಮ ಬೆಂಬಲಿಗರ ಜೊತೆ ಅಧಿಕೃತವಾಗಿ ಇಂದು ಬಿಜೆಪಿ ಸೇರ್ಪಡೆಯಾದರು. ಈ ಮೂಲಕ ಕೈ ಪಕ್ಷ ಬಿಟ್ಟು ಅಧಿಕೃತವಾಗಿ ಕೇಸರಿ ಪಕ್ಷದಲ್ಲಿ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದರು.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದ ಮುಂಭಾಗದಲ್ಲಿ ಅನರ್ಹ ಶಾಸಕರ ಪಕ್ಷ ಸೇರ್ಪಡೆ ಸಮಾರಂಭ ನಡೆಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಾರಂಭಕ್ಕೆ ಚಾಲನೆ ನೀಡಿದರು. ನಂತರ 16 ಅನರ್ಹ ಶಾಸಕರನ್ನು ಬಿಜೆಪಿಗೆ ಬರಮಾಡಿಕೊಳ್ಳಲಾಯಿತು. ಅನರ್ಹರಿಗೆ ಪಕ್ಷದ ಧ್ವಜ ನೀಡಿ ಶಾಲು ಹೊದಿಸಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತು. ಸಿಎಂ ಬಿಎಸ್ವೈ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್ ಅನರ್ಹ ಶಾಸಕರನ್ನು ಪಕ್ಷಕ್ಕೆ ಸ್ವಾಗತಿಸಿದ್ರು.
ರಮೇಶ್ ಜಾರಕಿಹೊಳಿ, ಹೆಚ್.ವಿಶ್ವನಾಥ್, ಮಹೇಶ್ ಕುಮಟಳ್ಳಿ, ಶ್ರೀಮಂತಗೌಡ ಪಾಟೀಲ್, ಪ್ರತಾಪ್ ಗೌಡ ಪಾಟೀಲ್, ಶಿವರಾಮ ಹೆಬ್ಬಾರ್, ಬಿ.ಸಿ. ಪಾಟೀಲ್, ಆನಂದ್ ಸಿಂಗ್, ಡಾ. ಸುಧಾಕರ್, ಬೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್, ಮುನಿರತ್ನ, ಗೋಪಾಲಯ್ಯ, ಕೆ.ಸಿ. ನಾರಾಯಣ ಗೌಡ ಹಾಗು ಶಂಕರ್ ತಮ್ಮ ಬೆಂಬಲಿಗರ ಜೊತೆ ಬಿಜೆಪಿ ಸೇರಿದರು. ಸಮಾರಂಭಕ್ಕೆ ಎಂ.ಟಿ.ಬಿ ನಾಗರಾಜ್ ಗೈರಾಗಿದ್ದು ಅವರು ಈಗಾಗಲೇ ಪಕ್ಷದ ಸದಸ್ಯತ್ವ ಪಡೆದಿದ್ದಾರೆ ಎಂದು ಪ್ರಕಟಿಸಲಾಯಿತು.
ಇದಕ್ಕೂ ಮುನ್ನ ಮೆರವಣಿಗೆ ಮೂಲಕ ಅನರ್ಹ ಶಾಸಕರು ಬಿಜೆಪಿ ಕಚೇರಿಗೆ ಆಗಮಿಸಿದರು. ಬೃಹತ್ ಕಾರ್ಯಕರ್ತರ ಪಡೆಯೊಂದಿಗೆ ಶಕ್ತಿ ಪ್ರದರ್ಶನ ಮಾಡಿದರು. ಕಾಡು ಮಲ್ಲೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ ನಂತರ ಬಿಜೆಪಿ ಸೇರ್ಪಡೆಯಾದರು.
ಉಲ್ಟಾ ಆದ ಬಿಜೆಪಿ ನಾಯಕರ ಪ್ಲಾನ್:
ದೇವಸ್ಥಾನದಿಂದ ನೇರವಾಗಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದು ಪಕ್ಷದ ಬಾವುಟ ನೀಡಿ ನಂತರವಷ್ಟೇ ಸದಸ್ಯತ್ವ ನೀಡಲು ಬಿಜೆಪಿ ನಾಯಕರು ಪ್ಲಾನ್ ಮಾಡಿದ್ದರು. ಆದರೆ ಗುಂಪಾಗಿ ಬರದೇ ಪ್ರತ್ಯೇಕವಾಗಿ ಬಿಜೆಪಿ ಕಚೇರಿಗೆ ಅನರ್ಹ ಶಾಸಕರು ಬಂದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಕಚೇರಿಯೊಳಗೆ ಕರೆದೊಯ್ದ ಸಚಿವ ಆರ್. ಅಶೋಕ್ ಕೆಲಕಾಲ ಮಾತುಕತೆ ನಡೆಸಿದರು. ನಂತರ ಕಚೇರಿಯೊಳಗೆ ಅಧಿಕೃತ ಪಕ್ಷ ಸೇರ್ಪಡೆಗೆ ಮುನ್ನವೇ ಸದಸ್ಯತ್ವ ಫಾರ್ಮ್‌ಗೆ ಅನರ್ಹ ಶಾಸಕರು ಸಹಿ ಹಾಕಿದರು.
ವೇದಿಕೆಗೆ ಬಂದು ಮರಳಿದ ಸಿಎಂ:
ವಿಧಾನಸೌಧದಿಂದ ನೇರವಾಗಿ ವೇದಿಕೆಯತ್ತ ಬಂದಿದ್ದ ಸಿಎಂ, ಇನ್ನೇನು ವೇದಿಕೆ ಏರಲು ಅಣಿಯಾದರು. ಈ ವೇಳೆ ಮುಖಂಡರು ಬಂದು ವಾಪಸ್ ಪಕ್ಷದ ಕಚೇರಿಯೊಳಗೆ ಕರೆದೊಯ್ದರು.
ಪಟ್ಟಿಯಲ್ಲಿ ರೋಷನ್ ಬೇಗ್ ಹೆಸರಲಿಲ್ಲ, ಅವರು ಬರಲೂ ಇಲ್ಲ:
ಬಿಜೆಪಿ ಸೇರುವ ಅನರ್ಹ ಶಾಸಕರ ಪಟ್ಟಿಯಿಂದ ರೋಷನ್ ಬೇಗ್ ಹೆಸರನ್ನು ಕೈ ಬಿಡಲಾಗಿದೆ. ಐಎಂಎ ಹಗರಣ ಕಾರಣದಿಂದಾಗಿ ಪಕ್ಷಕ್ಕೆ ಮುಜುಗರವಾಗುವುದನ್ನು ತಪ್ಪಿಸಲು ಬೇಗ್ ಬಿಜೆಪಿ ಸೇರ್ಪಡೆ ತಡೆ ಹಿಡಿಯಲಾಗಿದೆ ಎಂದು ಬಿಜೆಪಿ ಆಪ್ತ ಮೂಲಗಳು ತಿಳಿಸಿವೆ. ಪುತ್ರ ಹಾಗೂ ಬೆಂಬಲಿಗರೊಂದಿಗೆ ನಾಳೆ ಬಿಜೆಪಿ ಸೇರಲು ರೋಷನ್ ಬೇಗ್ ಸಿದ್ದವಾಗಿರುವುದಾಗಿ ಹೇಳಿದ್ದರೂ ಬಿಜೆಪಿ ನಾಯಕರು ಸದ್ಯಕ್ಕೆ ಬೇಗ್ ಸೇರ್ಪಡೆಗೆ ಬ್ರೇಕ್ ಹಾಕಿದ್ದಾರೆ. ಹೀಗಾಗಿ ಅವರು ಪಕ್ಷದ ಕಚೇರಿಯತ್ತ ಇಂದು ಸುಳಿಯಲಿಲ್ಲ.
ಬಿ.ಸಿ. ಪಾಟೀಲ್, ಕುಮಟಳ್ಳಿಗೆ ಮುಜುಗರ:
ಇನ್ನು ಅನರ್ಹ ಶಾಸಕ ಬಿ.ಸಿ. ಪಾಟೀಲ್ ಹಾಗೂ ಮಹೇಶ್ ಕುಮಟಳ್ಳಿ ಕಾರ್ಯಕ್ರಮದ ವೇದಿಕೆಯತ್ತ ತೆರಳಲು ಪೊಲೀಸರು ಅಡ್ಡಿಪಡಿಸಿದರು. ಗುಂಪಿನಲ್ಲಿ ಬಂದಿದ್ದ ಅನರ್ಹ ಶಾಸಕರನ್ನು ಯಾರೋ ಕಾರ್ಯಕರ್ತರು ಎಂದು ಭಾವಿಸಿ ವೇದಿಕೆ ಸಮೀಪ ತಡೆಯಲಾಯಿತು. ನಂತರ ವೇದಿಕೆ ಮೇಲಿಂದ ಸೂಚನೆ ನೀಡಿ ಒಳಬಿಡುವಂತೆ ಹೇಳಿದ ನಂತರ ಒಳಬಿಡಲಾಯಿತು. ಇದರಿಂದಾಗಿ ಅನರ್ಹ ಶಾಸಕರಿಬ್ಬರು ಕಸಿವಿಸಿಗೊಳಗಾದ್ರು.
ಭಾರತ ಮಾತೆಗೆ ಪುಷ್ಪಾರ್ಪಣೆ:
ಪಕ್ಷ ಸೇರ್ಪಡೆಗೂ ಮುನ್ನ ಭಾರತ ಮಾತೆಯ ಭಾವಚಿತ್ರಕ್ಕೆ ಎಲ್ಲಾ ಅನರ್ಹ ಶಾಸಕರೂ ಪುಷ್ಪಾರ್ಚನೆ ಮಾಡಿದರು.