ಬೆಂಗಳೂರು: ಸ್ಪೀಕರ್ ಅವರ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಭಾಗಶಃ ಒಪ್ಪಿದೆ. ರಾಜಕೀಯವಾಗಿ ನನ್ನನ್ನು ಮುಗಿಸಬೇಕು ಎಂಬುದು ಕೆಲವರ ಪಿತೂರಿಯಾಗಿತ್ತು. ಆದರೆ ಸುಪ್ರೀಂ ಕೋರ್ಟ್ನಿಂದ ಇವತ್ತು ಸ್ಪಷ್ಟ ಉತ್ತರ ಸಿಕ್ಕಿದೆ ಎಂದು ಚಿಕ್ಕಬಳ್ಳಾಪುರ ಅನರ್ಹ ಶಾಸಕ ಡಾ. ಕೆ.ಸುಧಾಕರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ರಾಜೀನಾಮೆ ಕೊಟ್ಟು 123 ದಿನಗಳಾಗಿವೆ. ರಾಜೀನಾಮೆ ಕೊಟ್ಟ ನಂತರ ಕಾಲಾವಕಾಶ ಕೊಡುವುದಕ್ಕೆ ಬರುವುದಿಲ್ಲ. ಅನರ್ಹತೆಯನ್ನು ನೀವು ನೋಡಿ ಮಾಡಬೇಕಿತ್ತು. ಅವರು ಯಾವುದೋ ಉದ್ದೇಶ ಇಟ್ಟುಕೊಂಡು ಹೀಗೆ ಮಾಡಲು ಹೋಗಿದ್ರು. ಆದರೆ ಅದಕ್ಕೆ ತಕ್ಕ ಉತ್ತರ ಸಿಕ್ಕಿದೆ ಎಂದಿದ್ದಾರೆ.
ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಅದನ್ನು ಮುಂದಿಟ್ಟು ಯಾರಿಗೆ ಮಾನವೀಯತೆ ಪಾಠ ಹೇಳಲು ಹೋಗುತ್ತೀರಿ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ನಾವು ಜೀತದಾಳುಗಳಾ? ನಾವು ಪಕ್ಷದ ವಿರುದ್ಧ ದನಿ ಎತ್ತುವಂತಿಲ್ಲವಾ? ಕಾಂಗ್ರೆಸ್ ಪಕ್ಷ ಬಿ ಫಾರಂ ನೀಡಿದರೂ ಗೆಲ್ಲುವಲ್ಲಿ ನಮ್ಮ ಪರಿಶ್ರಮ ಇಲ್ಲವಾ? ಒಂದು ಸಭೆಗೆ ಹೋಗಿಲ್ಲ ಅಂತ ಅನರ್ಹಗೊಳಿಸುವುದು ಎಷ್ಟು ಸರಿ? ನನಗೆ ಪಕ್ಷ ಬಿಡಬಾರದು ಅಂತಿತ್ತು. ಆದರೆ ಅನರ್ಹಗೊಳಿಸಿದ್ದಾರೆ.
ಪಕ್ಷದ ನಾಯಕರು, ಮತದಾರರನ್ನು ಕೇಳಿದ್ದೇನೆ. ಪಕ್ಷೇತರನಾಗಿ ಸ್ಪರ್ಧಿಸಬೇಕೆಂದಿದ್ದೆ. ಆದರೆ ಕೆಲವರು ರಾಷ್ಟ್ರೀಯ ಪಕ್ಷ ಸೇರು ಎಂದಿದ್ದಾರೆ. ಸ್ವತಂತ್ರ ಸ್ಪರ್ಧೆಗೆ ನಿರ್ಧರಿಸಿದ್ದೆ. ಆದರೆ ಜನರ ಒತ್ತಾಯಕ್ಕೆ ಬೆಲೆ ಕೊಡಬೇಕಿದೆ. ನಾಳೆ ಕೂಡ ಇನ್ನೊಂದು ಸಭೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ. ಉತ್ತಮ ನಿರ್ಧಾರ ಕೈಗೊಂಡು ರಾಜಕೀಯದಲ್ಲಿ ಮುಂದುವರಿಯುತ್ತೇನೆ. ರಾಜಕೀಯ ಬದುಕು ನನ್ನ ನಂಬಿದ ಜನರಿಗಾಗಿ ಅನಿವಾರ್ಯ. ಸ್ಪರ್ಧೆ, ಪಕ್ಷ ಸೇರ್ಪಡೆ, ನಾಮಪತ್ರ ಸಲ್ಲಿಕೆ ದಿನಾಂಕ ಮುಂದೆ ನಿರ್ಧರಿಸುತ್ತೇನೆ. ಪಕ್ಷ ಬೆಳೆಸುವ ಆಶಯ ಉಳ್ಳವರು ಕಾಂಗ್ರೆಸ್ನಲ್ಲಿ ಇಲ್ಲ. ಇದು ನನ್ನ ವೈಯುಕ್ತಿಕ ಅಭಿಪ್ರಾಯ ಎಂದಿದ್ದಾರೆ.
ಯಾವುದೋ ಉದ್ದೇಶವಿಟ್ಟುಕೊಂಡು ಹೀಗೆಲ್ಲ ಮಾಡಿದ್ದರು. ನೂರಕ್ಕೆ ನೂರರಷ್ಟು ನಮ್ಮ ಪರವಾಗಿಯೇ ತೀರ್ಪು ಬರಬೇಕಿತ್ತು. ಇತ್ತೀಚಿನ ಕೆಲವು ಅಂಶಗಳಿಂದ ಈ ತೀರ್ಪು ಬಂದಿದೆ. ಇದು ನನ್ನ ವೈಯುಕ್ತಿಕ ಅಭಿಪ್ರಾಯ. ಕೊಟ್ಟಿರುವ ತೀರ್ಪಿನ ರಿವ್ಯೂ ಆಗಬೇಕು. ನಾನು ಅನರ್ಹತೆಯಡಿ ಬರುವುದಿಲ್ಲವೆಂಬುದು ನನ್ನ ಅಭಿಪ್ರಾಯ. ಬೇರೆಯವರ ಜೊತೆ ನನ್ನನ್ನೂ ಪರಿಗಣಿಸಿದ್ದು ಸರಿಯಿಲ್ಲ. ನನ್ನ ಕೇಸ್ ಬೇರೆಯದ್ದೇ ಇದೆ. ವಿಚಾರಣೆ ವೇಳೆ ನನ್ನ ಕೇಸ್ ಹೆಚ್ಚಾಗಿ ವಾದವಾಗಿಲ್ಲ. ಹೀಗಾಗಿ ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದೇನೆ ಎಂದರು.
ನಮ್ಮನ್ನ ಮುಗಿಸಲೇಬೇಕೆಂಬ ಹುನ್ನಾರ:
ನಮ್ಮನ್ನ ಮುಗಿಸಲೇಬೇಕೆಂಬ ಹುನ್ನಾರ ನಡೆದಿತ್ತು. ಆ ಹುನ್ನಾರ ಸಂಪೂರ್ಣ ವಿಫಲವಾಗಿದೆ. ಕಳೆದ 14 ತಿಂಗಳು ನಮಗೆ ಸಾಕಷ್ಟು ಅಪಮಾನವಾಗಿತ್ತು. ನಮ್ಮ ಪಕ್ಷದ ಮಂತ್ರಿಗಳೇ ಸಿಎಂಗೆ ಸಲಹೆ ಕೊಟ್ಟಿದ್ದರು. ನನ್ನ ಕೆಲಸ ಮಾಡಿಕೊಡದಂತೆ ಹೇಳಿದ್ದರು. ಇದರ ಬಗ್ಗೆ ಕುಮಾರಸ್ವಾಮಿಯವರೇ ಹೇಳಿದ್ದರು ಎಂದು ಪರೋಕ್ಷವಾಗಿ ಶಿವಶಂಕರರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಕ್ಷೇತ್ರದಲ್ಲಿ ಪಕ್ಷವನ್ನ ಹಂತ ಹಂತವಾಗಿ ಬೆಳೆಸಿದ್ದೆ. ಆದರೆ ಪಕ್ಷ ತೆಗೆದುಕೊಂಡ ತೀರ್ಮಾನ ಸರಿ ಹೊಂದಲಿಲ್ಲ. ಮೈತ್ರಿ ಮಾಡಿಕೊಂಡಿದ್ದರಿಂದ ಹೀಗೆ ಮಾಡಬೇಕಾಯ್ತು. ಕಾಂಗ್ರೆಸ್ನವರಿಗೆ ನೈತಿಕತೆ ಎಲ್ಲಿದೆ? ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ಸಿಕ್ಕಿದ್ದಕ್ಕೆ ನಮ್ಮ ಪಕ್ಷದವರೇ ನಮ್ಮನ್ನ ಸಹಿಸಿಕೊಳ್ಳಲಿಲ್ಲ. ನಮ್ಮವರೇ ನಮ್ಮನ್ನ ತುಳಿಯೋಕೆ ಹೊರಟ್ರು. ನಾನು ಅದಕ್ಕೆ ಕುಮಾರಸ್ವಾಮಿಯವರೇ ಕಾರಣ ಅಂದುಕೊಂಡಿದ್ದೆ. ಅವರೇ ಎಲ್ಲಾ ವಾಸ್ತವವನ್ನ ನನಗೆ ತಿಳಿಸಿದ್ದಾರೆ ಎಂದು ಹೇಳಿದರು.
ಶರತ್ ಬಚ್ಚೇಗೌಡಗೆ ಜೆಡಿಎಸ್ ಬೆಂಬಲ ವಿಚಾರವಾಗಿ ಮಾತನಾಡಿ, ಅದರ ಬಗ್ಗೆ ನನಗೆ ಅಷ್ಟು ಗೊತ್ತಿಲ್ಲ. ಕುಮಾರಸ್ವಾಮಿಯವರ ಜೊತೆ ಸಂಬಂಧ ಚೆನ್ನಾಗಿದೆ. ಇನ್ನೂ ಸಮಯವಿದೆ, ನೋಡೋಣ. ಹೆಚ್.ನಾಗೇಶ್ ಅವರು ಈಗಾಗಲೇ ನನ್ನ ಪರವಾಗಿ ಹೋರಾಟ ಮಾಡುತ್ತೇನೆ ಅಂತ ಹೇಳಿದ್ದಾರೆ. ಅವರು ನನ್ನ ಆತ್ಮೀಯ ಸ್ನೇಹಿತರು. ಅದನ್ನು ನಾನು ಸ್ವಾಗತ ಮಾಡುತ್ತೇನೆ ಎಂದರು.