ಬೆಂಗಳೂರು: ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಬಿಜೆಪಿ ದೂರು ನೀಡಿದೆ.
ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿ ನಾಯಕರ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಪರಿಷತ್ ಸದಸ್ಯ ನಾರಾಯಣ ಸ್ವಾಮಿ, ಎ.ಎಚ್ ಆನಂದ್ ಸೇರಿದಂತೆ ಬಿಜೆಪಿ ಮುಖಂಡರು ನಿಯೋಗ ಪೊಲೀಸ್ ಆಯುಕ್ತರನ್ನ ಭೇಟಿ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯನ್ನ ಜೋಕರ್ ಗಳೆಂದು ತುಂಬಾ ಕೆಟ್ಟದಾಗಿ ಎಡಿಟ್ ಮಾಡುವುದು, ಬಿಜೆಪಿ ಬಗ್ಗೆ ಅವಹೇಳನಕಾರಿ ಪೊಸ್ಟ್ ಹಾಕಿರುವ ಪೇಜ್ಗಳ ಅಡ್ಮಿನ್ಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ದೂರು ಕೊಟ್ಟ ನಂತರ ಮಾತನಾಡಿದ ನಾರಾಯಣ್ ಸ್ವಾಮಿ, ರಾಜ್ಯದಲ್ಲಿ ಉಪಚುನಾವಣೆ ಪ್ರಾರಂಭವಾದ ಮೇಲೆ ಬಿಜೆಪಿಯ ನಾಗಾಲೋಟ ನೋಡಿ ತಡೆಯಲಾಗದೆ ಈ ರೀತಿ ಮಾಡಲಾಗುತ್ತಿದೆ. ಕೆಲ ಕಿಡಿಗೇಡಿಗಳು ಅವಹೇಳನಕಾರಿ ಪೋಸ್ಟ್ ಹಾಕುತ್ತಿದ್ದಾರೆ. ಅದರಲ್ಲೂ ಅನರ್ಹ ಶಾಸಕರ ವಿರುದ್ಧ ಫೇಸ್ಬುಕ್ ಪೇಜ್ಗಳಲ್ಲಿ ಅಪಮಾನ ಮಾಡಲಾಗುತ್ತಿದೆ. ಬೇಕೆಂದು ಅನರ್ಹ ಶಾಸಕರನ್ನ ಟಾರ್ಗೆಟ್ ಮಾಡಲಾಗುತ್ತಿದ್ದು, ಜೋಕರ್ಸ್ ಆಫ್ ಬಿಜೆಪಿ ಎಂಬ ಪೇಜ್ ಸೇರಿದಂತೆ ಕೆಲ ಪೇಜುಗಳು ಅಶ್ಲೀಲ ಫೋಟೋಗಳನ್ನ ಬಿತ್ತರಿಸುತ್ತಿವೆ. ಇಂತಹ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.