ಬೆಂಗಳೂರು: ವಿಧಾನ ಪರಿಷತ್ನಲ್ಲಿ ಇಂದು ಕೂಡ ರಾಜ್ಯದ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಗಂಭೀರ ಚರ್ಚೆಗಳು ನಡೆದವು.
ಹಂಪಿ ಉತ್ಸವ, ಗ್ರಾಮೀಣ ಭಾಗದಲ್ಲಿ ಅಂತರ್ಜಲ ಸ್ಥಿತಿಗತಿ, ಅಂಗನವಾಡಿ, ಶಾಲಾ ಕಟ್ಟಡಗಳ ಸ್ಥಿತಿಗತಿ, ಸರ್ಕಾರಿ ಶಾಲಾ ಬಸ್ಗಳಲ್ಲಿ ರಿಯಾಯಿತಿ, ಬಸ್ ಪಾಸ್ ಸೌಲಭ್ಯ, ಬಿಎಂಟಿಸಿ ಬಸ್ ಅಪಘಾತ, ಶುದ್ಧ ಕುಡಿಯುವ ನೀರಿನ ಘಟಕ, ಗ್ರಾಮ ಪಂಚಾಯ್ತಿ ಕ್ರಿಯಾ ಯೋಜನೆ ಮಂಜೂರು, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಇತ್ಯಾದಿ ವಿಚಾರಗಳ ಕುರಿತು ಚರ್ಚೆ ನಡೆಯಿತು.
ಅಂಗನವಾಡಿ ಸಮಸ್ಯೆ ಹಾಗೂ ಸ್ವಚ್ಛ ಭಾರತ್ ವಿಚಾರವಾಗಿ ತಿಪ್ಪೇಸ್ವಾಮಿ ಕೇಳಿದ ಪ್ರಶ್ನೆ ದೊಡ್ಡ ಚರ್ಚೆಗೆ ಕಾರಣವಾಯಿತು. ಪರಿಷತ್ ಸದಸ್ಯರ ಪ್ರಶ್ನೆಗೆ ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಸಿ.ಟಿ.ರವಿ, ಕೆ.ಎಸ್.ಈಶ್ವರಪ್ಪ, ಶಶಿಕಲಾ ಜೊಲ್ಲೆ, ಮಾಧುಸ್ವಾಮಿ ಮತ್ತಿತರ ಸಚಿವರು ಚರ್ಚೆಯಲ್ಲಿ ಪಾಲ್ಗೊಂಡು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸುವ ಭರವಸೆ ನೀಡಿದರು.
ಇದಾದ ಬಳಿಕ ನಡೆದ ಶೂನ್ಯ ವೇಳೆ ಚರ್ಚೆಯಲ್ಲಿ ಕೂಡ ಸದಸ್ಯರು ಕೇಳಿದ ಪ್ರಶ್ನೆಗೆ ಸಂಬಂಧಿಸಿದಂತೆ ಸಚಿವರು ಲಿಖಿತ ಉತ್ತರ ನೀಡಿದರು. ಇದರ ಮೇಲೆ ಕೂಡ ಚರ್ಚೆ ನಡೆಯಿತು.
ಖಾಸಗಿ ವಿಧೇಯಕದ ಮೇಲೆ ಚರ್ಚೆ:
ಶರಣಪ್ಪ ಮಟ್ಟೂರ 2018ನೇ ಸಾಲಿನಲ್ಲಿ ಮಂಡಿಸಿದ್ದ ಅಸಲು ಹಣಕ್ಕಿಂತ ಹೆಚ್ಚು ಬಡ್ಡಿ ವಿಧಿಸುವುದಕ್ಕೆ ನಿಷೇಧ ವಿಧೇಯಕದ ಮೇಲೆ ಪರ್ಯಾಲೋಚನೆ ನಡೆಯಿತು. ಹಲವು ಸದಸ್ಯರು ಇದಕ್ಕೆ ತಮ್ಮ ಸಲಹೆ ನೀಡಿದರು. ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಪರಿಷತ್ ಕಲಾಪವನ್ನು ಸೋಮವಾರ ಬೆಳಗ್ಗೆ 11ಕ್ಕೆ ಮುಂದೂಡಿದರು.