ಬೆಂಗಳೂರು: ಯುದ್ಧಪೀಡಿತ ಉಕ್ರೇನ್ನಿಂದ ರಾಜ್ಯಕ್ಕೆ ವಾಪಸ್ಸಾಗಿರುವ ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣದ ಭವಿಷ್ಯದ ಬಗ್ಗೆ ರಾಜೀವ್ ಗಾಂಧಿ ಆರೋಗ್ಯ ವಿವಿ ಉಪಕುಲಪತಿಗಳ ಜೊತೆ ಸಭೆ ನಡೆಸಿ ಚರ್ಚಿಸಿರುವುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ವಿಧಾನಸಭೆಗೆ ಹೇಳಿದ್ದಾರೆ.
ಶೂನ್ಯವೇಳೆಯಲ್ಲಿ ಇಂದು ಪ್ರತಿಪಕ್ಷದ ಉಪ ನಾಯಕ ಯು.ಟಿ.ಖಾದರ್ ಅವರ ಪ್ರಸ್ತಾಪಕ್ಕೆ ಸರ್ಕಾರದ ಪರವಾಗಿ ಉತ್ತರ ನೀಡಿದ ಸಚಿವರು, ವೈದ್ಯಕೀಯ ಶಿಕ್ಷಣ ನೀತಿ ರೂಪಿಸುವುದು ನ್ಯಾಷನಲ್ ಮೆಡಿಕಲ್ ಕೌನ್ಸಿಲ್. ರಾಜ್ಯ ಸರ್ಕಾರಕ್ಕೆ ಈ ರೀತಿ ಯಾವುದೇ ನೀತಿ ರೂಪಿಸುವ ಅವಕಾಶವಿಲ್ಲ. ಆದರೂ, ಇಲ್ಲಿಂದ ಯಾವ ರೀತಿಯಲ್ಲಿ ನ್ಯಾಷನಲ್ ಮೆಡಿಕಲ್ ಕೌನ್ಸಿಲ್, ನೀಟ್‌ಗೆ ಶಿಫಾರಸ್ಸು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
ತಾಲೂಕು ಹಂತದಲ್ಲಿ ನೀಟ್ ಕೋಚಿಂಗ್ ಅನ್ನು ಸರ್ಕಾರದ ವತಿಯಿಂದಲೇ ಕೊಡಲು ನಿರ್ಧರಿಸಲಾಗಿದೆ. ವೈದ್ಯಕೀಯ ಶಿಕ್ಷಣದ ನೀತಿಯನ್ನು ಯಾವ ರಾಜ್ಯ ಸರ್ಕಾರಕ್ಕೂ ಮಾಡಲು ಸಾಧ್ಯವಿಲ್ಲ. ಪದವಿ ಹಂತದಲ್ಲಿ ಶೇ.85ರಷ್ಟು ಸೀಟುಗಳು ಅಖಿಲ ಭಾರತ ಕೋಟಾದಡಿ ದೊರೆಯುತ್ತದೆ. ಸ್ನಾತಕೋತ್ತರ ಪದವಿಯಲ್ಲಿ ತಲಾ ಶೇ.50ರಷ್ಟು ಸೀಟು ಲಭ್ಯವಾಗಲಿವೆ. ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಶೇ.50ರಷ್ಟು ಸರ್ಕಾರಿ ಶುಲ್ಕ ನಿಗದಿಯ ಘೋಷಣೆ ಮಾಡುವ ಪ್ರಸ್ತಾವನೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. ಹಾಗಾಗಿ ಇದರಿಂದ ವೈದ್ಯಕೀಯ ಶಿಕ್ಷಣದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿವೆ ಎಂದರು.
ರಾಜ್ಯ ಸರ್ಕಾರದಿಂದಲೇ ನೀಟ್ ಕೋಚಿಂಗ್ ನೀಡುವ ಬಗ್ಗೆಯೂ ತೀರ್ಮಾನ ಮಾಡಿದೆ. ವಿದ್ಯಾರ್ಥಿಗಳಿಗೆ ಕಾಲೇಜುಗಳ ಪ್ರವೇಶದ ಬಗ್ಗೆ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ತೀರ್ಮಾನ ಮಾಡಬೇಕಾಗುತ್ತದೆ ಎಂದರು.
ಉಕ್ರೇನ್‌ನಲ್ಲಿ ದೇಶದ 20 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಕರ್ನಾಟಕದ ವಿದ್ಯಾರ್ಥಿಗಳು ಸೇರಿದಂತೆ ಹಲವರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಉಳಿದಿರುವವರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನಗಳು ನಡೆದಿವೆ ಎಂದು ಸಚಿವರು ಸದನಕ್ಕೆ ತಿಳಿಸಿದರು.
ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ್ದ ಯು.ಟಿ.ಖಾದರ್, ಉಕ್ರೇನ್‌ನಲ್ಲಿ ಹಾವೇರಿಯ ನವೀನ್ ಎಂಬ ವಿದ್ಯಾರ್ಥಿಯನ್ನು ಕಳೆದುಕೊಂಡಿದ್ದೇವೆ. ಯುದ್ಧದಿಂದ ವಾಪಸ್ಸಾದ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯದ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ನೀಟ್ ಪರೀಕ್ಷೆಯಲ್ಲೂ ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಇದನ್ನು ಸರ್ಕಾರ ಮರು ವಿಮರ್ಶೆ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಮುಂದಿನ ಒಂದು ವರ್ಷದಲ್ಲಿ 30 ಸಾವಿರ ಮಹಿಳಾ ಉದ್ಯಮಿಗಳನ್ನು ಮುನ್ನಲೆಗೆ ತರಲು ತೀರ್ಮಾನ
ಪಡಿತರ ಚೀಟಿದಾರರಿಗೆ ಸರ್ವರ್ ಸಮಸ್ಯೆಗೆ ಪರಿಹಾರ: ಪಡಿತರ ಚೀಟಿದಾರರಿಗೆ ಸರ್ವರ್ ಸಮಸ್ಯೆಯಿಂದ ಉಂಟಾಗಿರುವ ತೊಂದರೆಯನ್ನು ಶೀಘ್ರ ಸರಿಪಡಿಸಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಉಮೇಶ್ ಕತ್ತಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ಶಾಸಕರು ಈ ಸರ್ವರ್ ಸಮಸ್ಯೆಯನ್ನು ಸದನದ ಗಮನಕ್ಕೆ ತಂದಿದ್ದಾರೆ. ಕೂಡಲೇ ಸರಿಪಡಿಸುವ ಕೆಲಸ ಮಾಡಲಾಗುವುದು ಎಂದರು.
ಇದಕ್ಕೂ ಮುನ್ನ ಮಾತನಾಡಿದ ಶಿವಲಿಂಗೇಗೌಡ, ಸರ್ವರ್ ಸಮಸ್ಯೆಯಿಂದ ಪಡಿತರ ಚೀಟಿದಾರರು ಗುಡ್ಡಕ್ಕೆ ಹೋಗಿ ಹೆಬ್ಬೆಟ್ಟು ಕೊಡುವಂತಾಗಿದೆ. ನಮ್ಮ ಕ್ಷೇತ್ರದ ಸುಮಾರ 45ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಈ ಸಮಸ್ಯೆ ಇದೆ ಎಂದು ಹೇಳಿದರು. ಸಭಾಧ್ಯಕ್ಷರೂ ಸೇರಿದಂತೆ ಹಲವು ಶಾಸಕರು ಈ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿದರು.
ತೊಗರಿ ಖರೀದಿ ಮಾಡುತ್ತೇವೆ: ತೊಗರಿ ಖರೀದಿಗೆ ಮಾರ್ಚ್ 31ರವರೆಗೂ ಅವಕಾಶವಿದೆ. ಈಗಾಗಲೇ ಕಡಲೆ ಖರೀದಿಯನ್ನು ಗದಗದಲ್ಲಿ ಪ್ರಾರಂಭಿಸಿದ್ದು, ಹಂತ ಹಂತವಾಗಿ ಇತರೆಡೆಯೂ ಖರೀದಿಸಲಾಗುವುದು ಎಂದು ಸಚಿವ ಉಮೇಶ್ ಕತ್ತಿ ಹೇಳಿದರು.
ಶಾಸಕ ದೊಡ್ಡನಗೌಡ ಪಾಟೀಲ್ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಹುನಗುಂದದಲ್ಲಿ 11 ಸಾವಿರ ಕ್ವಿಂಟಾಲ್ ತೊಗರಿ ಖರೀದಿಸಲಾಗಿದ್ದು, ಅದನ್ನು ಗೋದಾಮಿಗೆ ಸಾಗಿಸಲಾಗುವುದು ಎಂದರು. ಇದಕ್ಕೂ ಮುನ್ನ ಶಾಸಕರು, ಹುನಗುಂದ, ಇಳಕಲ್‍ನಲ್ಲಿ ತೊಗರಿ ಖರೀದಿ ಮುಂದುವರೆಸಬೇಕು. ಕಡಲೆ ಖರೀದಿ ಕೇಂದ್ರ ಆರಂಭಿಸಲಬೇಕೆಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ತೊಂದರೆ ಆಗದು: ಬೆಂಗಳೂರು-ಕಲ್ಯಾಣ ಕರ್ನಾಟಕ ಭಾಗದ 371(ಜೆ) ಅಡಿಯಲ್ಲಿ ಇರುವ ಮೀಸಲಾತಿಗೆ ಅನುಗುಣವಾಗಿ ವೈದ್ಯಕೀಯ ವಿದ್ಯಾರ್ಥಿಗಳ ಪ್ರವೇಶಕ್ಕೆ ಆದೇಶ ಮಾಡಲಾಗಿದ್ದು, ಸರ್ಕಾರ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ವಿಧಾನಸಭೆಯಲ್ಲಿ ತಿಳಿಸಿದರು.
ಶೂನ್ಯವೇಳೆಯಲ್ಲಿ ಶಾಸಕ ಡಾ. ಶಿವರಾಜ್ ಪಾಟೀಲ್ ಮತ್ತಿತರರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಮೀಸಲಾತಿ ಅನ್ವಯ ದಾಖಲಾತಿಗೆ ಆದೇಶ ಮಾಡಲಾಗಿದ್ದು, ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ನವೋದಯ ಮೆಡಿಕಲ್ ಕಾಲೇಜು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದೆ. ಆದರೂ ಆ ಪ್ರವೇಶದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಇಂದು ತಡೆಯಾಜ್ಞೆ ಸಂಬಂಧ ಪ್ರಕರಣ ವಿಚಾರಣೆಗೆ ಬರುತ್ತಿದ್ದ ಸರ್ಕಾರದ ಅಡ್ವೋಕೇಟ್ ಜನರಲ್ ಹಾಜರಾಗುತ್ತಿದ್ದಾರೆ ಎಂಬ ವಿಚಾರ ಸರ್ಕಾರದ ಗಮನಕ್ಕೆ ತಂದರು. ಇದಕ್ಕೂ ಮುನ್ನ ಮಾತನಾಡಿದ ಡಾ.ಶಿವರಾಜ್ ಪಾಟೀಲ್, 371(ಜೆ) ಅಡಿಯಲ್ಲಿ ಪ್ರವೇಶ ಸಿಗುತ್ತಿಲ್ಲ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಲೋಪದೋಷವಿದ್ದರೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಶಾಸಕ ರಾಜುಗೌಡ ಇದಕ್ಕೆ ದನಿಗೂಡಿಸಿ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು 1948ರಲ್ಲಿ. ಕಲ್ಯಾಣ ಕರ್ನಾಟಕ ಸಮಸ್ಯೆ ಬಗೆಹರಿಸುವುದೇ ಆಗಿದೆ. ಸಮಸ್ಯೆಗಳೇ ಹೆಚ್ಚಾಗುತ್ತಿದೆ. ರಾಯಚೂರಿನಲ್ಲಿ ಕಾಲೇಜು ಸ್ಥಾಪಿಸಿ ಮೀಸಲಾತಿ ಕೊಡುವುದಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.
ಸದನ ಸಮಿತಿ ರಚಿಸಿ ಆ ಸಮಿತಿ ನವೋದಯ ಕಾಲೇಜಿಗೆ ಭೇಟಿ ನೀಡಿ ಸರಿಪಡಿಸುವ ಕೆಲಸವಾಗಬೇಕು ಎಂದು ಸಲಹೆ ಮಾಡಿದರು.