ಬೆಂಗಳೂರು: ಬಿಜೆಪಿ ಆಡಳಿತದ ಮೊದಲ ಮಾಸಿಕ ಸಭೆಯಲ್ಲಿ ರಸ್ತೆ ಗುಂಡಿ ಹಾಗೂ ಕಸದ ವಿಚಾರ ಆಡಳಿತ-ವಿರೋಧ ಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ನವೆಂಬರ್ ಹತ್ತರ ಬಳಿಕವೂ ರಸ್ತೆಗಳಲ್ಲಿ ಗುಂಡಿಗಳು ಕಂಡುಬಂದಲ್ಲಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಹಾಗೂ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಮೇಯರ್ ಗೌತಮ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಚರ್ಚೆಯ ವೇಳೆ, ನವೆಂಬರ್ 2ರಿಂದ ಸ್ವತಃ ಮೇಯರ್ ರಸ್ತೆಗಿಳಿದು ರಸ್ತೆಗುಂಡಿ ಪರಿಶೀಲಿಸುವುದಾಗಿ ಹೇಳಿದರು. ರಸ್ತೆಗುಂಡಿ ಸಮಸ್ಯೆ ಹೆಚ್ಚಾಗಿದ್ದು ತಕ್ಷಣ ಗುಂಡಿಮುಚ್ಚುವ ಬದಲು ನವೆಂಬರ್ 10 ರವರೆಗೆ ಗಡುವು ನೀಡಿದ್ಯಾಕೆ? ಜನರಿಗೆ ತೊಂದರೆಯಾದ್ರೆ ಮೇಯರ್ ಗೌತಮ್ ಕುಮಾರ್ ಹೊಣೆ ಹೊರಬೇಕೆಂದು ವಿಪಕ್ಷ ನಾಯಕ ವಾಜಿದ್ ಆಕ್ರೋಶ ವ್ಯಕ್ತಪಡಿಸಿದ್ರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕಾಂಗ್ರೆಸ್ ಅವಧಿಯಲ್ಲಿ ಮಾಡಿದ ಕಳಪೆ ರಸ್ತೆಯಿಂದಾಗಿ ರಸ್ತೆಗುಂಡಿ ಬಿದ್ದಿದೆ ಎದಿರೇಟು ಕೊಟ್ಟರು.
ಸಭೆಯ ಆರಂಭದಲ್ಲೇ ನೂತನ ಆಡಳಿತ ಪಕ್ಷ ನಾಯಕ ಮುನೀಂದ್ರ ಕುಮಾರ್ ಮಾತನಾಡಿ, ಮೇಯರ್ ಅನುದಾನದ ಹಣದಲ್ಲಿ ನೀಡುವ ಮೆಡಿಕಲ್ ಫಂಡ್ ಖಾಲಿಯಾಗಿದೆ. ಮೈತ್ರಿ ಪಕ್ಷದ 4 ವರ್ಷಗಳ ಆಡಳಿತಾವಧಿಯಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸಿದ್ರು.