ಬೆಂಗಳೂರು: ಕೋವಿಡ್-19 ವೈರಸ್ (ಕೊರೊನಾ) ಹರಡದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಳ್ಳುವಲ್ಲಿ ನಮ್ಮ ರಾಜ್ಯವು ಇಡೀ ದೇಶದಲ್ಲೇ ಒನ್ ಆಫ್ ದಿ ಬೆಸ್ಟ್ ಸ್ಟೇಟ್ ಎನ್ನುವ ಹೆಗ್ಗಳಿಕೆ ಪಡೆದಿದೆ. ಹಾಗಾಗಿ ಯಾರೂ ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಧರ್ಮಸೇನಾ, ಸೀನು ಬಂದರೆ, ಕೆಮ್ಮಿದರೆ ಕೊರೊನಾ ವೈರಸ್ ಹರಡುತ್ತದೆ ಎಂದು ತಿಳಿದುಬಂದಿದೆ, ಹೀಗಾಗಿ ನಾನು ಸೀನುವುದಕ್ಕೂ ಭಯವಾಗ್ತಿದೆ ಎಂದರು.
ಬಿಜೆಪಿ ಸದಸ್ಯ ಪ್ರಾಣೇಶ್ ಮಾತನಾಡಿ, ಇದೊಂದು ಗಂಭೀರ ವಿಚಾರವಾಗಿದ್ದು, ಚರ್ಚೆ ಮಾಡಬೇಕು. ಸರ್ಕಾರ ವೈರಸ್ ನಿಯಂತ್ರಣ ಮಾಡಲು ಸೂಕ್ತ ಕ್ರಮ ವಹಿಸಬೇಕು. ಮಾಸ್ಕ್ಗಳನ್ನು ಉಚಿತವಾಗಿ ವಿತರಿಸಬೇಕು ಎಂದರು. ಕಾಂಗ್ರೆಸ್ನ ಐವನ್ ಡಿಸೋಜ, ಮಾಸ್ಕ್ ಮಾರಾಟದಲ್ಲಿ ಮೋಸ ಆಗುತ್ತಿದೆ. ಅಂಗಡಿಗಳಲ್ಲಿ ಹೆಚ್ಚಿನ ಬೆಲೆಗೆ ಮಾಸ್ಕ್ ಮಾರಾಟ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟಬೇಕು ಎಂದರು.
ಬಿಜೆಪಿಯ ನಾರಾಯಣ ಸ್ವಾಮಿ, ಕೊರೊನಾ ವೈರಸ್ಗೆ ಆಯುರ್ವೇದದಲ್ಲಿ ಔಷಧಿ ಇದೆಯಾ? ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಆರ್ಯುವೇದ ಔಷಧಿ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದರು. ಸಚಿವ ಶಿವರಾಂ ಹೆಬ್ಬಾರ್ ಮಾತನಾಡಿ, ಉತ್ತರ ಕನ್ನಡ, ಗೋವಾ ಪಕ್ಕದಲ್ಲಿರುವ ಜಿಲ್ಲೆ. ಗೋವಾಗೆ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ದೇಶ, ವಿದೇಶದ ಪ್ರವಾಸಿಗರು ಕ್ಯಾಸಿನೋ ಆಡಲು ಬರುತ್ತಾರೆ. ಹೀಗಾಗಿ ಉತ್ತರ ಕನ್ನಡ ಜಿಲ್ಲೆ ಮತ್ತು ಗೋವಾ ಗಡಿಯಲ್ಲೆ ತಪಾಸಣೆ ಕೇಂದ್ರ ಮಾಡಬೇಕು.
ಆಗ ಇದನ್ನು ನಿಯಂತ್ರಿಸಬೇಕು ಎಂದರು. ಬಿಜೆಪಿ ರುದ್ರೇಗೌಡ ಮಾತನಾಡಿ, ಕರೋನಾ ವೈರಸ್ 27 ಡಿಗ್ರಿಗಿಂತ ಕಡಿಮೆ ಉಷ್ಣಾಂಶ ಇರುವ ಕಡೆ ಹೆಚ್ಚಾಗಿ ಹರಡುತ್ತೆ. ಈಗ ಈ ಸದನದಲ್ಲೂ ಎಸಿ ಹಾಕಿರುವುದರಿಂದ ಉಷ್ಣಾಂಶ ಕಡಿಮೆ ಇದೆ. ಹೀಗಾಗಿ ಉಷ್ಣಾಂಶ ಹೆಚ್ಚಿಸುವ ಕ್ರಮ ವಹಿಸಬೇಕು ಎಂದರು.
ಸುದೀರ್ಘ ಚರ್ಚೆಗೆ ಉತ್ತರ ನೀಡಿದ ಸಚಿವ ಸುಧಾಕರ್, ಕೊರೋನಾ (ಕೋವಿಡ್-19) ಗಾಳಿಯಿಂದ ಬರಲ್ಲ. ಎಂಜಲು ಅಂಶದಿಂದ ಬರಲಿದೆ, ಬೆವರಿನಿಂದ ಬರಲಿದೆ, ಈ ಅಂಶ ನಮ್ಮ ಕೈಗಳಿಗೆ ಬರಲಿದೆ. ಹಾಗಾಗಿ ಪದೇ ಪದೇ ಕಣ್ಣು, ಮೂಗು, ಬಾಯಿ ಮುಟ್ಟಿಕೊಳ್ಳುವುದು ಕಡಿಮೆ ಮಾಡಬೇಕು. ಕೈಯನ್ನು ಆಗಾಗ ತೊಳೆಯಬೇಕು. ಜ್ವರ, ಕೆಮ್ಮು, ಶೀತ ಇರುವವರು ಮಾಸ್ಕ್ ಧರಿಸಿಕೊಳ್ಳಬೇಕು. ಆರು ಪದರ ಇರುವ ಮಾಸ್ಕ್ ಹಾಕಿಕೊಳ್ಳಬೇಕು. ಮಾಸ್ಕ್ಗಳ ಕೊರತೆ ಇಲ್ಲ, ಆದರೆ ಬೇಡಿಕೆ ಜಾಸ್ತಿ ಇದೆ. ಉತ್ಪಾದಕರು ದರವನ್ನು ಮೂರರಷ್ಟು ಹೆಚ್ಚು ಮಾಡಿದ್ದಾರೆ, ನಾವು ಆರು ತಿಂಗಳಿಗೆ ಆಗುವಷ್ಟು ಮಾಸ್ಕ್ಗಳನ್ನು ಆರ್ಡರ್ ಮಾಡಿದ್ದೇವೆ. ಔಷಧಿ ಕೂಡ ಆರು ತಿಂಗಳಿಗೆ ಆಗುವಷ್ಟು ಆರ್ಡರ್ ಮಾಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆ, ಐಬಿಎಂ ಕೇಂದ್ರದಲ್ಲಿ ವೈರಾಲಜಿ ಲ್ಯಾಬ್ ಉದ್ಘಾಟನೆ ಮಾಡಲಾಗಿದೆ, ನಿಮ್ಹಾನ್ಸ್ನಲ್ಲಿ ಕೂಡ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ. ಚಿಕಿತ್ಸೆಗಾಗಿ 650 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ, ಸೈನ್ಯ, ಅರೆಸೇನೆ, ಕಮಾಂಡರ್ ಆಸ್ಪತ್ರೆಗಳಲ್ಲಿಯೂ ವ್ಯವಸ್ಥೆ ಮಾಡಲಿದ್ದೇವೆ. ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು, ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಿದ್ದೇವೆ ಎಂದು ಹೇಳಿದರು.
60 ವರ್ಷ ದಾಟಿದವರಿಗೆ ಈ ರೋಗ ಬೇಗ ಬರಲಿದೆ. ರೋಗನಿರೋಧಕ ಶಕ್ತಿ ಕಡಿಮೆ ಇರುವರಿಗೆ ಬೇಗ ಹರಡಲಿದೆ. ಮಕ್ಕಳಲ್ಲಿ ಹೆಚ್ಚು ಕಾಣಿಸುತ್ತಿಲ್ಲ ಇದು ಒಳ್ಳೆಯ ಬೆಳವಣಿಗೆ, ಯುವ ಸಮೂಹದಲ್ಲೂ ಹೆಚ್ಚು ಕಾಣುತ್ತಿಲ್ಲ, ವಯಸ್ಸಾದವರಲ್ಲೇ ಜಾಸ್ತಿ ಬರುತ್ತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ, ಒಂದೇ ಒಂದು ಪ್ರಕರಣ ಇಲ್ಲದೇ ಇದ್ದರೂ 15 ದಿನದಿಂದಲೇ ತಪಾಸಣೆ ನಡೆಸುತ್ತಿದ್ದೇವೆ. ಬೆಂಗಳೂರು ವಿಮಾನ ನಿಲ್ದಾಣದಲ್ಲೇ 40 ಸಾವಿರ ಪ್ರಯಾಣಿಕರ ತಪಾಸಣೆ, ಮಂಗಳೂರು ವಿಮಾನ ನಿಲ್ದಾಣದಲ್ಲಿ 20 ಸಾವಿರ ಪ್ರಯಾಣಿಕರ ತಪಾಸಣೆ ಮಾಡಿಸಿದ್ದೇವೆ. ಸೋಂಕು ತಗುಲಿದರೆ ಹೇಗೆ ಚಿಕಿತ್ಸೆ ನೀಡಬೇಕು ಎಂದು ಮಾರ್ಗ ಸೂಚಿಯನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ. ಅದರಂತೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರದ ಜೊತೆ ಪ್ರತಿ ದಿನ ನಿರಂತರ ಸಂಪರ್ಕದಲ್ಲಿದ್ದೇವೆ ಎಂದರು.
ಮುನ್ನೆಚ್ಚರಿಕೆ ಕ್ರಮಗಳು:
- ಬಹಳ ಜನ ಸೇರುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು
- ಮದುವೆ, ಸಮಾವೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕು
- ಕೆಮ್ಮಿನ ಲಕ್ಷ್ಮಣ ಇರುವವರು ಮಾಸ್ಕ್ ಧರಿಸಬೇಕು
- ಆರು ಪದರ ಇರುವ ಮಾಸ್ಕ್ ಧರಿಸಬೇಕು
- ಶೀತ, ಜ್ವರ, ಕೆಮ್ಮು ಕಂಡು ಬಂದರೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು
- ಕೈಗಳನ್ನು ಆಗಾಗ ಶುಚಿಗೊಳಿಸಬೇಕು
- ಪರಸ್ಪರ ಹಸ್ತಲಾಘವದ ಬದಲು ನಮಸ್ಕರಿಸುವ ಪರಿಪಾಠ ಅಳವಡಿಸಿಕೊಳ್ಳಿ
- ವಿಟಮಿನ್ ಸಿ ಇರುವ ಪದಾರ್ಥಗಳ ಸೇವನೆ ಮಾಡಬೇಕು
- ಸಾಮಾಜಿಕವಾಗಿ ಒಗ್ಗಟ್ಟು ಪ್ರದರ್ಶನ ಮಾಡಬೇಕು
- ಮಾನಸಿಕ ಧೈರ್ಯ ಸ್ಥೈರ್ಯ ಬೇಕು
- ವದಂತಿಗಳಿಗೆಕಿವಿ ಕೊಡಬಾರದು
- ನಿಯಂತ್ರಣ, ಮುನ್ನೆಚ್ಚರಿಕೆ ಬಗ್ಗೆ ಮಾತ್ರ ಹೆಚ್ಚು ಪ್ರಚಾರ ಮಾಡಬೇಕು ಮಾಧ್ಯಮಗಳು
ರಾಮುಲು, ಹೆಚ್ಡಿಕೆ ಕುಟುಂಬದ ಮದುವೆ ಪ್ರಸ್ತಾಪ:
ಮದುವೆಯಂತಹ ಕಾರ್ಯಕ್ರಮದಿಂದ ದೂರ ಇರುವ ಕುರಿತ ಸಲಹೆ ಬರುತ್ತಿದ್ದಂತೆ ಸಚಿವ ಬಿ.ಶ್ರೀರಾಮುಲು ಪುತ್ರಿಯ ವಿವಾಹದ ವಿಷಯ ಪ್ರಸ್ತಾಪವಾಯಿತು. ನಾಳೆ ಅರಮನೆ ಮೈದಾನದಲ್ಲಿ ಮದುವೆ ನಡೆಯಲಿದೆ, ಆರೋಗ್ಯ ಸಚಿವರ ಪುತ್ರಿಯ ಮದುವೆಗೆ ಕೊರೊನಾ ಆತಂಕ ಇಲ್ಲವೇ ಎಂದು ಜೆಡಿಎಸ್ ಸದಸ್ಯರು ಸಚಿವರ ಕಾಲೆಳೆದರು. ಇದಕ್ಕೆ ತಕ್ಕ ಉತ್ತರ ನೀಡಿದ ಸಚಿವ ಸುಧಾಕರ್, ನಮಗೆ ಅರಮನೆ ಮೈದಾನದ ಒಳ ಆವರಣದಲ್ಲಿ ನಡೆಯುವ ಮದುವೆ ಬಗ್ಗೆ ಆತಂಕ ಇಲ್ಲ. ಆದರೆ ನಿಮ್ಮ ನಾಯಕರ ಮಗನ ಮದುವೆ 100 ಎಕರೆ ಜಾಗದಲ್ಲಿ ನಡೆಯಲಿದೆ. ಆ ಬಗ್ಗೆ ನಮಗೆ ಆತಂಕವಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪುತ್ರನ ಮದುವೆ ಪ್ರಸ್ತಾಪಿಸಿ ಟಾಂಗ್ ನೀಡಿದರು.
ಆಯುರ್ವೇದ ಚಿಕಿತ್ಸೆ ಇಲ್ಲ:
ಕೊರೊನಾಗೆ ಆಯುರ್ವೇದದಲ್ಲಿ ಔಷಧಿ ಇದೆ ಎನ್ನುವುದನ್ನು ನಂಬುವುದು ಬೇಡ, ಔಷಧಿ ಇನ್ನು ಬಂದಿಲ್ಲ, ವಿಶ್ವ ಆರೋಗ್ಯ ಸಂಸ್ಥೆ ಔಷಧಿ ಬಗ್ಗೆ ಹೇಳಲಿದೆ. ಹಾಗಾಗಿ ಇದನ್ನು ಯಾರೂ ನಂಬಬೇಡಿ. ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲಕ ವಿಜ್ಞಾನಿ ಲಸಿಕೆ ಬಗ್ಗೆ ಸಂಶೋಧನೆ ನಡೆಸಿ ಕೆಲ ಮಾಹಿತಿ ಕೊಟ್ಟಿದ್ದಾರೆ. ಲಸಿಕೆ ಕಂಡು ಹಿಡಿಯುವ ಹಾದಿಯಲ್ಲಿ ಅವರು ಸಫಲವಾಗಲಿ ಎಂದರು.
ಕೊರೊನಾ ಬಂತು ನೀವೂ ಬಂದ್ರಿ:
ಕೊರೊನಾ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಸರ್ಕಾರದ ಉತ್ತರಕ್ಕೆ ಸದನದ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಸಚಿವ ಡಾ.ಸುಧಾಕರ್ ಕಾಲೆಳೆದ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ, ಅಲ್ರಿ ಸುಧಾಕರ್ ಡಾಕ್ಟರ್ ಆಗಿ ಇಂತಹ ಒಳ್ಳೆ ಕೆಲಸ ಮಾಡೋದ್ ಬಿಟ್ಟು, ಇಂಧನ ಖಾತೆ ಬೇಕು ಅಂತಾ ಹೋಗಿದ್ರಲ್ರಿ, ಕೊರೊನಾ ಬಂತು ಈ ಖಾತೆಗೆ ನೀವು ಬಂದ್ರಿ, ಒಳ್ಳೇದೇ ಆಯ್ತು ನೋಡ್ರಿ. ಈ ಖಾತೆ ನಿಮಗೆ ಚಲೋ ಐತಿ ಎಂದರು.