ಬೆಂಗಳೂರು: ನಾನು ಕಾಂಗ್ರೆಸ್‌ನ ಶಿಸ್ತಿನ ಸಿಪಾಯಿ. ಪಕ್ಷದ ಹಿರಿಯ ನಾಯಕರ ಜತೆ ಚರ್ಚಿಸಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮಾಜಿ ಸಚಿವ ರೋಷನ್ ಬೇಗ್ ಹೇಳಿದರು.
ಬೆಂಗಳೂರಿನ ಫ್ರೇಜರ್ ಟೌನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನನ್ನು ಪಕ್ಷದಿಂದ ಅಮಾನತು ಮಾಡಿರುವ ಬಗೆಗಿನ ಆದೇಶ ಕಳೆದ ರಾತ್ರಿ ಕೈ ಸೇರಿದೆ. ಪಕ್ಷದ ಅಭಿಪ್ರಾಯ ಹಾಗು ಜನ ಏನು ಹೇಳುತ್ತಿದ್ದಾರೋ ಅದನ್ನು ನಾನು ಹೇಳಿದ್ದೇನೆ ಅಷ್ಟೇ. ಹಾಗಂತ ಸತ್ಯ ಹೇಳಿದರೆ ಅಪರಾಧವಾಗುತ್ತಾ? ನಾನು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ಈವರೆಗೂ ಏನೂ ಹೇಳಲಿಲ್ಲ ಎಂದರು.
ಪಕ್ಷದ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್. ಮುನಿಯಪ್ಪ, ರಾಮಲಿಂಗಾರೆಡ್ಡಿ ಹಾಗೂ ಎಚ್.ಕೆ. ಪಾಟೀಲ್ ಅವರೊಂದಿಗೆ ಸಮಾಲೋಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ದಿಲ್ಲಿಗೆ ತೆರಳಬೇಕೇ, ಬೇಡವೇ ಎಂಬ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.
ಕೋಲಾರದಲ್ಲಿ ಮುನಿಯಪ್ಪ ವಿರುದ್ಧ ನೇರ ಹೇಳಿಕೆ ನೀಡುವವರಿಗೆ, ಮಂಡ್ಯದಲ್ಲಿ ಸುಮಲತಾಗೆ ಬೆಂಬಲ ನೀಡಿದವರ ಬಗ್ಗೆ ಯಾರೂ ಮಾತಾಡುವುದು ಬೇಡವೇ? ಎಂದು ಸಿದ್ದರಾಮಯ್ಯ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ತುಮಕೂರಿನಲ್ಲಿ ಸಂಸದರಾಗಿದ್ದ ಮುದ್ದಹನುಮೇಗೌಡರಿಗೆ ಮೋಸ ಮಾಡಿಬಲಿಕೊಟ್ಟಿರಿ. ಇದು ಯಾವ ನ್ಯಾಯ? ನಾನು ಪಕ್ಷದಲ್ಲೇ ಇರುತ್ತೇನೆ. ಎಲ್ಲೂ ಹೋಗಲ್ಲ. ಪಕ್ಷದಲ್ಲಿ ಸತ್ಯ ಹೇಳಿದರೆ ಅಪರಾಧವಾಗುತ್ತದೆ. ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರ ದನಿಯಾಗಿದ್ದು ತಪ್ಪಾ? ಈ ಬಗ್ಗೆ ರಾಹುಲ್ ಗಾಂಧಿ ವಿವರಿಸುವುದಾಗಿ ಅವರು ಇದೇ ವೇಳೆ ಹೇಳಿದ್ರು.